ಮುಂಬೈ: ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸುವುದು ಸವಾಲಾಗಿದೆ. ಹಾಗಾಗಿ, ಜೂನ್ 5ರಿಂದ 7ರ ವರೆಗೆ ನಡೆಯಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಕಡಿತಗೊಳಿಸುವ ಸಾಧ್ಯತೆ ಕಡಿಮೆಯಿದೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಮಾರನೇ ದಿನವೇ ಸಭೆ ಆರಂಭವಾಗಲಿದೆ. ಗವರ್ನರ್ ಶಕ್ತಿಕಾಂತ ದಾಸ್ ಅವರು ಇದರ ಅಧ್ಯಕ್ಷತೆವಹಿಸಲಿದ್ದು, ಜೂನ್ 7ರಂದು ಸಭೆಯ ನಿರ್ಣಯ ಪ್ರಕಟಿಸಲಿದ್ದಾರೆ.
ರೆಪೊ ದರ ಕಡಿತಗೊಳಿಸದಿದ್ದರೆ ಗೃಹ, ವಾಹನ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಇರುವ ಸಾಲಗಾರರಿಗೆ ನಿರಾಸೆಯಾಗಲಿದೆ.
2023ರ ಫೆಬ್ರುವರಿಯಲ್ಲಿ ನಡೆದ ದ್ವೈಮಾಸಿಕ ಸಭೆಯಲ್ಲಿ ಆರ್‌ಬಿಐ ರೆಪೊ ದರವನ್ನು ಶೇ 6.5ಕ್ಕೆ ಹೆಚ್ಚಿಸಿತ್ತು. ಕಳೆದ ಆರು ಎಂಪಿಸಿ ಸಭೆಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
‘ಕಳೆದ ಎರಡು ತಿಂಗಳ ಅವಧಿಯಲ್ಲಿ ದೇಶದ ಆರ್ಥಿಕ ಸ್ಥಿತಿಗತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯಾಗಿಲ್ಲ. ಆರ್ಥಿಕತೆಯ ಮಾನದಂಡ ನಿರ್ಧರಿಸುವ ಜಿಎಸ್‌ಟಿ ಸಂಗ್ರಹ ಮತ್ತು ತಯಾರಿಕಾ ವಲಯವಷ್ಟೇ ಬೆಳವಣಿಗೆ ದಾಖಲಿಸಿವೆ’ ಎಂದು ಬ್ಯಾಂಕ್ ಆಫ್ ಬರೋಡಾದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ.
‘ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 5ಕ್ಕಿಂತಲೂ ಕಡಿಮೆ ದಾಖಲಾಗಿದೆ. ಆದರೆ, ಬಿಸಿ ಗಾಳಿಯು ತರಕಾರಿಗಳ ಬೆಲೆ ಏರಿಕೆ ಮೇಲೆ ನೇರ ಪರಿಣಾಮ ಬೀರಲಿದೆ. ಭಾರತೀಯ ಹವಾಮಾನ ಇಲಾಖೆಯು ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಅಂದಾಜಿಸಿದೆ. ಈ ಬೆಳವಣಿಗೆಗಳನ್ನು ಅವಲೋಕಿಸಿದರೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆಯಿದೆ’ ಎನ್ನುತ್ತಾರೆ ಅವರು.
‘ಚಿಲ್ಲರೆ ಹಣದುಬ್ಬರವು ಶೇ 4ಕ್ಕಿಂತಲೂ ಹೆಚ್ಚಿದೆ. ಹಾಗಾಗಿ, ರೆಪೊ ದರ ಕಡಿತಗೊಳಿಸುವ ಸಾಧ್ಯತೆ ಕಡಿಮೆ ಇದೆ’ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ಅಧ್ಯಕ್ಷ ಸಂಜಯ್ ನಾಯರ್ ಹೇಳಿದ್ದಾರೆ.
‘ಏಪ್ರಿಲ್‌ನ ಹಣದುಬ್ಬರದ ಅಂಕಿಅಂಶಗಳನ್ನು ಅವಲೋಕಿಸಿದರೆ ಆಹಾರ ಮತ್ತು ಸರಕುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಹಾಗಾಗಿ, ಹಣಕಾಸು ನೀತಿ ಸಮಿತಿ ಸಭೆಯು ರೆಪೊ ದರವನ್ನು ಇಳಿಕೆ ಮಾಡುವ ನಿರೀಕ್ಷೆ ಕಡಿಮೆ ಇದೆ’ ಎನ್ನುತ್ತಾರೆ ಕ್ರೆಡಿಟ್ ರೇಟಿಂಗ್ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.