ಬೆಂಗಳೂರು: ದೇಶದ ಹಣಕಾಸು ಕ್ಷೇತ್ರವನ್ನು ಬಲಿಷ್ಠ, ಕ್ರಿಯಾಶೀಲ ಮತ್ತು ಗ್ರಾಹಕ ಕೇಂದ್ರಿತವನ್ನಾಗಿ ಮಾಡಲು ಕೇಂದ್ರೀಯ ಬ್ಯಾಂಕ್ ನೀತಿಗಳು, ವ್ಯವಸ್ಥೆಗಳು ಮತ್ತು ವೇದಿಕೆಗಳ ಕುರಿತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್’ ಕುರಿತು ಬೆಂಗಳೂರಲ್ಲಿ ನಡೆದ ಆರ್‌ಬಿಐನ 90ನೇ ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಯುನಿಫೈಡ್ ಲೆಂಡಿಂಗ್ ಇಂಟರ್‌ಫೇಸ್ (ಯುಎಲ್‌ಐ) ಮತ್ತು ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್ ಕರೆನ್ಸಿಗೆ (ಸಿಬಿಡಿಸಿ) ಸಂಬಂಧಿಸಿದಂತೆ ಆರ್‌ಬಿಐ ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿವಸಿದರು.
ಬೇರೆ ಬೇರೆ ದೇಶಗಳ ಗ್ರಾಹಕರು/ಕಂಪನಿಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ತ್ವರಿತವಾಗಿ ಹಣ ವರ್ಗಾವಣೆ ಮಾಡುವುದಕ್ಕೆ, ಯುಪಿಐ ಸೂಕ್ತ ಪರ್ಯಾಯ ವ್ಯವಸ್ಥೆಯಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದೆ. ಚಿಕ್ಕ ಮೊತ್ತವನ್ನು ವರ್ಗಾವಣೆ ಮೂಲಕ ಯುಪಿಎ ಬಳಸಿ ವ್ಯವಹಾರವನ್ನು ಆರಂಭಿಸಬಹುದು ಎಂದು ಹೇಳಿದರು.
ಡಿಪಿಐ ಮತ್ತು ಹೊಸ ತಂತ್ರಜ್ಞಾನಗಳ ವಿಷಯದ ಕುರಿತು ಮಾತನಾಡಿದ ಅವರು, ‘ಕಳೆದ ದಶಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಅಳವಡಿಕೆಗೆ ವೇಗ ಸಿಕ್ಕಿದ್ದು, ಒಟ್ಟಾರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಭೂತಪೂರ್ವ ಬದಲಾವಣೆಗೆ ಇದು ಕಾರಣವಾಗಿದೆ‘ ಎಂದರು.
‘ಮುಂಬರುವ ವರ್ಷಗಳಲ್ಲಿ, ಈ ಪರಿವರ್ತನೆ ಪ್ರಕ್ರಿಯೆಗೆ ಇನ್ನಷ್ಟು ವೇಗ ಸಿಗುವ ಸಾಧ್ಯತೆಯಿದೆ’ ಎಂದೂ ಹೇಳಿದರು.
ಸಾಲ ನೀಡುವ ವ್ಯವಸ್ಥೆಗೂ ಕಳೆದ ವರ್ಷ ಡಿಜಿಟಲ್ ಸ್ಪರ್ಶ ನೀಡಿದ್ದು, ಸುಲಲಿತವಾಗಿ ಸಾಲ ವಿತರಿಸುವ ತಂತ್ರಜ್ಞಾನ ಆಧಾರಿತ ವೇದಿಕೆಗೆ ಚಾಲನೆ ನೀಡಲಾಯಿತು. ಈ ವ್ಯವಸ್ಥೆಯನ್ನು ‘ಯುನಿಫೈಡ್ ಲೆಂಡಿಂಗ್ ಇಂಟರ್‌ಫೇಸ್’ (ಯುಎಲ್‌ಐ) ಎಂಬುದಾಗಿ ಕರೆಯುವ ಉದ್ದೇಶವಿದೆ ಎಂದ ಅವರು, ‘ಯುಎಲ್‌ಐ’ ಸೌಲಭ್ಯವನ್ನು ಶೀಘ್ರದಲ್ಲೇ ದೇಶದಾದ್ಯಂತ ಜಾರಿಗೊಳಿಸಲಾವುದು ಎಂದರು.
ಕೃಷಿ ಮತ್ತು ಎಂಎಸ್‌ಎಂಇ ಸೇರಿದಂತೆ ಎಲ್ಲ ಕ್ಷೇತ್ರಗಳ ಗ್ರಾಹಕರಿಗೆ ಯುಎಲ್‌ಐ ಹೆಚ್ಚು ಅನುಕೂಲಕರವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.