ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ವರಮಾನದಲ್ಲಿ ಶೇ 17.04ರಷ್ಟು ಏರಿಕೆಯಾಗಿದ್ದರೆ, ವೆಚ್ಚದ ಪ್ರಮಾಣವು ಶೇ 56.30ರಷ್ಟು ತಗ್ಗಿದೆ. ಒಟ್ಟು ಜಮಾಖರ್ಚು ಪಟ್ಟಿಯ (ಬ್ಯಾಲನ್ಸ್ ಷೀಟ್) ಗಾತ್ರವೂ ಹೆಚ್ಚಳವಾಗಿದೆ.
2022–23ನೇ ಆರ್ಥಿಕ ವರ್ಷದಲ್ಲಿ ₹2.35 ಲಕ್ಷ ಕೋಟಿ ವರಮಾನ ಗಳಿಸಿತ್ತು. 2023–24ರಲ್ಲಿ ₹2.75 ಲಕ್ಷ ಕೋಟಿ ಗಳಿಸಿದೆ ಎಂದು ಗುರುವಾರ ಬಿಡುಗಡೆಯಾಗಿರುವ ವಾರ್ಷಿಕ ವರದಿ ತಿಳಿಸಿದೆ.
ಬಡ್ಡಿ ವರಮಾನವು ₹1.88 ಲಕ್ಷ ಕೋಟಿ ಆಗಿದೆ. ವಿದೇಶಿ ಸೆಕ್ಯುರಿಟೀಸ್‌ಗಳಿಂದ ₹65,327 ಕೋಟಿ ಬಡ್ಡಿ ವರಮಾನ ಗಳಿಸಿದೆ. ತುರ್ತು ನಿಧಿಗೆ ₹42,820 ಕೋಟಿ ನೀಡಿದೆ.
ಜಮಾಖರ್ಚು ಪಟ್ಟಿ ಗಾತ್ರ ಏರಿಕೆ:
2023ರ ಮಾರ್ಚ್ ಅಂತ್ಯಕ್ಕೆ ಆರ್‌ಬಿಐನ ಜಮಾಖರ್ಚು ಪಟ್ಟಿಯ ಮೊತ್ತ ₹63.45 ಲಕ್ಷ ಕೋಟಿ ಇತ್ತು. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ₹70.47 ಲಕ್ಷ ಕೋಟಿಗೆ ಮುಟ್ಟಿದೆ. ಒಟ್ಟು ₹7.02 ಲಕ್ಷ ಕೋಟಿ ಸೇರ್ಪಡೆಯಾಗಿದ್ದು, ಒಟ್ಟಾರೆ ಶೇ 11.08ರಷ್ಟು ಏರಿಕೆಯಾಗಿದೆ.
ಆರ್‌ಬಿಐ ಜಮಾಖರ್ಚಿನ ಮೊತ್ತವು ನೆರೆಯ ಪಾಕಿಸ್ತಾನದ ಜಿಡಿಪಿ ಗಾತ್ರಕ್ಕಿಂತಲೂ (₹28 ಲಕ್ಷ ಕೋಟಿ) ಎರಡೂವರೆ ಪಟ್ಟು ಹೆಚ್ಚಿದೆ.
ವಿದೇಶಿ ಸ್ವತ್ತು ಮೌಲ್ಯ ಏರಿಕೆ:
2022–23ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಆರ್‌ಬಿಐ ಸ್ವತ್ತುಗಳ ಮೌಲ್ಯದಲ್ಲಿ ಶೇ 30.5ರಷ್ಟು, ಸಂಗ್ರಹದಲ್ಲಿರುವ ಚಿನ್ನದ ಮೌಲ್ಯ ಶೇ 18.26ರಷ್ಟು ಹಾಗೂ ವಿದೇಶಿ ಹೂಡಿಕೆಗಳಲ್ಲಿ ಶೇ 13.90ರಷ್ಟು ಹೆಚ್ಚಳವಾಗಿದೆ.
ವಿದೇಶಿ ಕರೆನ್ಸಿ ಸ್ವತ್ತುಗಳು, ಚಿನ್ನ, ವಿದೇಶದಲ್ಲಿರುವ ಸಂಸ್ಥೆಗಳಿಗೆ ಸಾಲ ಮತ್ತು ಮುಂಗಡ ನೀಡಿಕೆಯಲ್ಲೂ ಶೇ 76.92ರಷ್ಟು ಏರಿಕೆಯಾಗಿದೆ. ಆದರೆ, ದೇಶೀಯ ಮಟ್ಟದಲ್ಲಿನ ಸ್ವತ್ತುಗಳ ಮೌಲ್ಯದಲ್ಲಿ ಶೇ 26.08ರಿಂದ ಶೇ 23.31ಕ್ಕೆ ಇಳಿಕೆಯಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಆರ್‌ಬಿಐನ ಚಿನ್ನ ಸಂಗ್ರಹ ಪ್ರಮಾಣವು 6.94 ಟನ್‌ನಷ್ಟು ಹೆಚ್ಚಳವಾಗಿದೆ. ಒಟ್ಟು ಚಿನ್ನದ ಸಂಗ್ರಹ 822.10 ಟನ್ ಆಗಿದೆ.
ವಂಚನೆ: 2023–24ನೇ ಹಣಕಾಸು ವರ್ಷದಲ್ಲಿ ದೇಶದ ಬ್ಯಾಂಕಿಂಗ್ ವಲಯದಲ್ಲಿ 36,075 ವಂಚನೆ ಪ್ರಕರಣಗಳು ವರದಿಯಾಗಿದ್ದು, ಇವುಗಳ ಒಟ್ಟು ಮೊತ್ತ ₹13,930 ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.