ADVERTISEMENT

ಬಜೆಟ್‌ ತೆರಿಗೆ ಪ್ರಸ್ತಾವ: ಮರು ಚಿಂತನೆ?

ಅತಿ ಶ್ರೀಮಂತರ ಮೇಲೆ ಸರ್ಚಾರ್ಜ್‌, ಕಂಪನಿ ಪಾಲು ಬಂಡವಾಳ ಬದಲು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 20:00 IST
Last Updated 2 ಆಗಸ್ಟ್ 2019, 20:00 IST
   

ನವದೆಹಲಿ: ಅತಿ ಶ್ರೀಮಂತರ ಮೇಲೆ ಸರ್ಚಾರ್ಜ್‌ ವಿಧಿಸುವ ಮತ್ತು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳಲ್ಲಿನ ಪ್ರವರ್ತಕರ ಪಾಲು ಬಂಡವಾಳ ತಗ್ಗಿಸುವ ಬಜೆಟ್‌ ಪ್ರಸ್ತಾವಗಳ ಬಗ್ಗೆ ಕೇಂದ್ರ ಸರ್ಕಾರವು ಮರು ಚಿಂತನೆ ನಡೆಸುವ ಸಾಧ್ಯತೆ ಇದೆ.

ಪ್ರಧಾನಿ ಕಚೇರಿ, ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಮತ್ತು ಸರ್ಕಾರದ ಚಿಂತಕರ ಚಾವಡಿ ಆಗಿರುವ ನೀತಿ ಆಯೋಗ ಈ ವಿಷಯಗಳನ್ನು ಪರಿಶೀಲಿಸುತ್ತಿವೆ. ಈ ಬಗ್ಗೆ ಅಧ್ಯಯನ ನಡೆಸಲು ಆರ್ಥಿಕ ವ್ಯವಹಾರಗಳ ಇಲಾಖೆಗೆ ಕೇಳಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಪೊರೇಟ್‌ ಅಲ್ಲದ ವಿದೇಶಿ ಹೂಡಿಕೆ ಸಂಸ್ಥೆಗಳೂ ಅತಿ ಶ್ರೀಮಂತ ವ್ಯಕ್ತಿಗಳ ಮೇಲೆ ಸರ್ಚಾರ್ಜ್‌ ವಿಧಿಸುವ ಪ್ರಸ್ತಾವದ ವ್ಯಾಪ್ತಿಗೆ ಬರುವುದರಿಂದ ದೇಶಿ ಷೇರುಪೇಟೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬರುತ್ತಿವೆ. ಜುಲೈ 5ರಂದು ಬಜೆಟ್‌ ಮಂಡನೆ ಮಾಡಿದ ನಂತರ ಇದುವರೆಗೆ ವಿದೇಶಿ ಹೂಡಿಕೆದಾರರಿಗೆ ಸೇರಿದ (ಎಫ್‌ಪಿಐ) ₹ 12 ಸಾವಿರ ಕೋಟಿ ಬಂಡವಾಳದ ಹೊರ ಹರಿವು ನಡೆದಿದೆ.

ADVERTISEMENT

ವಾರ್ಷಿಕ ₹ 2 ಕೋಟಿಗಿಂತ ಹೆಚ್ಚು ಆದಾಯ ಗಳಿಸುವವರಿಗೆ ತೆರಿಗೆ ಹೊರೆ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಈ ಕ್ರಮವು ಭಾರತದ ಬಂಡವಾಳ ಮಾರುಕಟ್ಟೆಯು ವಿದೇಶಿ ಹೂಡಿಕೆ ಆಕರ್ಷಿಸಲು ಹಿಂದೆ ಬೀಳಲಿದೆ. ಹೀಗಾಗಿ ಈ ನಿರ್ಧಾರ ಪುನರ್‌ ಪರಿಶೀಲಿಸಬೇಕು ಎಂದು ವಿದೇಶಿ ಹೂಡಿಕೆದಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಾಲು ಬಂಡವಾಳ ಹೆಚ್ಚಳ ಪ್ರಸ್ತಾವ ಸ್ಥಗಿತ
ಕಂಪನಿಗಳಲ್ಲಿನ ಸಾರ್ವಜನಿಕರ ಪಾಲು ಬಂಡವಾಳವನ್ನು ಸದ್ಯದ ಶೇ 25 ರಿಂದ ಶೇ 35ಕ್ಕೆ ಹೆಚ್ಚಿಸುವ ಪ್ರಸ್ತಾವವನ್ನು ಸದ್ಯಕ್ಕೆ ಸ್ಥಗಿತಗೊಳಿಸಲೂ ಸರ್ಕಾರ ಆಲೋಚಿಸುತ್ತಿದೆ. ಈ ಪ್ರಸ್ತಾವ ಜಾರಿಗೆ ಬಂದರೆ ಕಂಪನಿಗಳು ಪ್ರವರ್ತಕರಿಗೆ ಸೇರಿದ ₹ 1 ಲಕ್ಷ ಕೋಟಿ ಮೊತ್ತದ ಷೇರುಗಳನ್ನು ಸಾರ್ವಜನಿಕರಿಗಾಗಿ ಬಿಡುಗಡೆ ಮಾಡಬೇಕಾಗುತ್ತದೆ.

ಕಂಪನಿಗಳಲ್ಲಿನ ಪ್ರವರ್ತಕರ ಮತ್ತು ಸಾರ್ವಜನಿಕರ ಪಾಲು ಬಂಡವಾಳದ ಸದ್ಯದ (75;25) ಅನುಪಾತವನ್ನು 65:35ಕ್ಕೆ ಬದಲಿಸುವ ಅಧಿಸೂಚನೆಯನ್ನು ಈ ವರ್ಷ ಹೊರಡಿಸುವುದಿಲ್ಲ. ಈ ಸಂಬಂಧ ಸರ್ಕಾರಕ್ಕೆ ಹಲವಾರು ಮನವಿಗಳು ಬಂದಿವೆ. ಈ ಪ್ರಸ್ತಾವದ ಕಾರ್ಯಸಾಧ್ಯತೆಯನ್ನು ವಿವರವಾಗಿ ಪರಿಶೀಲಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.