ADVERTISEMENT

ಮೋದಿಗೆ ಕರೆ; ಬ್ರಿಟನ್–ಭಾರತ ಮುಕ್ತ ಮಾರುಕಟ್ಟೆ ಮಾತುಕತೆಗೆ ಸಿದ್ಧ ಎಂದ ಸ್ಟಾರ್ಮರ್

ಪಿಟಿಐ
Published 6 ಜುಲೈ 2024, 14:11 IST
Last Updated 6 ಜುಲೈ 2024, 14:11 IST
<div class="paragraphs"><p>ಕೀರ್ ಸ್ಟಾರ್ಮರ್, ನರೇಂದ್ರ ಮೋದಿ</p></div>

ಕೀರ್ ಸ್ಟಾರ್ಮರ್, ನರೇಂದ್ರ ಮೋದಿ

   

ಲಂಡನ್: ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕೀರ್ ಸ್ಟಾರ್ಮರ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶನಿವಾರ ದೂರವಾಣಿ ಮೂಲಕ ಮಾತನಾಡಿದ್ದು, ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಎರಡೂ ಕಡೆಯಿಂದ ಪ್ರಯತ್ನಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಬ್ರಿಟನ್‌ನ ಕನ್ಸರ್ವೆಟಿವ್ ಪಾರ್ಟಿ ಸರ್ಕಾರದೊಂದಿಗೆ ಕಳೆದ ಎರಡು ವರ್ಷಗಳಿಂದ ಈ ಮುಕ್ತ ಮಾರುಕಟ್ಟೆ ಒಪ್ಪಂದ ಕುರಿತ ಮಾತಕತೆ ನಡೆದಿತ್ತು. ಆದರೆ ಎರಡೂ ದೇಶಗಳ ಸಾರ್ವತ್ರಿಕ ಚುನಾವಣೆಯಿಂದಾಗಿ 14 ಸುತ್ತಿನಲ್ಲಿ ಮಾತುಕತೆ ಸ್ಥಗಿತಗೊಂಡಿತ್ತು. ಇದೀಗ ಬ್ರಿಟನ್‌ನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಲೇಬರ್ ಪಕ್ಷದ ಸರ್ಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುವ ನಿರೀಕ್ಷೆ ಗರಿಗೆದರಿದೆ.

ADVERTISEMENT

‘ಉಭಯ ರಾಷ್ಟ್ರಗಳ ನಡುವೆ ಉತ್ತಮ ಹಾಗೂ ಗೌರವಯುತ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸುವುದನ್ನು ಎದುರು ನೋಡುತ್ತಿದ್ದೇನೆ. ಬದಲಾಗುತ್ತಿರುವ ಹವಾಮಾನ ಮತ್ತು ಆರ್ಥಿಕ ಪ್ರಗತಿಯಲ್ಲಿ ಜಾಗತಿಕ ಬದಲಾವಣೆಯಲ್ಲಿ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಸ್ವಾಗತಿಸುತ್ತೇನೆ’ ಎಂದು ಸ್ಟರ್ಮರ್ ಹೇಳಿದ್ದಾರೆ.

‘ಎರಡೂ ರಾಷ್ಟ್ರಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುವುದು ಮತ್ತು ಸೇನೆ ಹಾಗೂ ಭದ್ರತೆಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2030ರ ನೀಲನಕ್ಷೆ ಸಿದ್ಧಪಡಿಸುವ ಅಗತ್ಯವಿದೆ. ಇದರೊಂದಿಗೆ ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಹವಾಮಾನ ಕುರಿತು ಎರಡೂ ರಾಷ್ಟ್ರಗಳ ಸಹಕಾರ ಇನ್ನಷ್ಟು ವಿಸ್ತಾರಗೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಬೋರಿಸ್ ಜಾನ್ಸನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ 2022ರ ಜನವರಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ₹ 40ಸಾವಿರ ಕೋಟಿ ಮೊತ್ತದ ವ್ಯಾಪಾರ ಒಪ್ಪಂದ ನಡೆದಿತ್ತು. ಈ ಒಪ್ಪಂದ ಬ್ರಿಟನ್‌ನಲ್ಲಿ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗಿತ್ತು. ಲೇಬರ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಭಾರತದೊಂದಿಗಿನ ಸಂಬಂಧ ವೃದ್ಧಿಯನ್ನು ಒತ್ತಿ ಹೇಳಿತ್ತು. ಇದೇ ಮಾತನ್ನು ಸ್ಟರ್ಮರ್ ನೇತೃತ್ವದ ಸರ್ಕಾರದ ವಿದೇಶಾಂಗ ಸಚಿವ ಡೇವಿಡ್ ಲ್ಯಾಮ್ಮಿ ಪುನರುಚ್ಚರಿಸಿದ್ದಾರೆ.

ಮುಕ್ತ ಮಾರುಕಟ್ಟೆಯ ನಮ್ಮ ಮಾತುಕತೆಯನ್ನು ಪೂರ್ಣಗೊಳಿಸೋಣ ಎಂದು ವಿತ್ತ ಸಚಿವೆ ಸೀತಾರಾಮನ್ ಹಾಗೂ ಕಾರ್ಮಿಕ ಸಚಿವ ಪಿಯೂಷ್ ಗೋಯಲ್ ಅವರಿಗೆ ವಾರದ ಹಿಂದೆಯಷ್ಟೇ ಲ್ಯಾಮ್ಮಿ ಸಂದೇಶ ಕಳಿಸಿದ್ದನ್ನು ಇಲ್ಲ ಸ್ಮರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.