ADVERTISEMENT

ಫ್ಲಿಪ್‌ಕಾರ್ಟ್‌ನಲ್ಲಿ ರೀಚಾರ್ಜ್, ಬಿಲ್‌ ಪಾವತಿ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:19 IST
Last Updated 11 ಜುಲೈ 2024, 16:19 IST
flipkart
flipkart   

ಬೆಂಗಳೂರು: ದೇಶದ ಇ–ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಗ್ರಾಹಕರಿಗೆ ಬಿಲ್‌ ಪಾವತಿಗೆ ಅನುಕೂಲ ಕಲ್ಪಿಸಲು ತನ್ನ ಆ್ಯಪ್‌ನಲ್ಲಿ ಹೊಸ ಬಿಲ್‌ ಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ.

ಸದ್ಯ ಇರುವ ವಿದ್ಯುತ್ ಬಿಲ್ ಮತ್ತು ಮೊಬೈಲ್ ಪ್ರೀಪೇಯ್ಡ್ ಸೌಲಭ್ಯದ ಜೊತೆಯಲ್ಲಿಯೇ ಈಗಿನಿಂದ ಆ್ಯಪ್‌ನಲ್ಲಿ ಫಾಸ್ಟ್‌ಟ್ಯಾಗ್, ಡಿಟಿಎಚ್ ರೀಚಾರ್ಜ್‌, ಲ್ಯಾಂಡ್‌ಲೈನ್, ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಪೋಸ್ಟ್‌ಪೇಯ್ಡ್ ಬಿಲ್‌ ಪಾವತಿ ಮಾಡಬಹುದಾಗಿದೆ.  

ಈ ಸೌಲಭ್ಯಕ್ಕಾಗಿ ಫ್ಲಿಪ್‌ಕಾರ್ಟ್ ಭಾರತದ ಪೇಮೆಂಟ್ ಸೆಲ್ಯೂಷನ್ಸ್ ಕಂಪನಿ ಬಿಲ್‌ಡೆಸ್ಕ್ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಮೂಲಕ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿರುವ ಭಾರತ್ ಬಿಲ್ ಪೇಮೆಂಟ್ಸ್ ಸಿಸ್ಟಂನೊಂದಿಗೆ (ಬಿಬಿಪಿಎಸ್‌) ಹೊಸ ಸೇವೆಗಳನ್ನು ಸೇರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಗ್ರಾಹಕರು ಫ್ಲಿಪ್‌ಕಾರ್ಟ್ ಯುಪಿಐ ಅನ್ನು ಬಳಸಿಕೊಂಡು ತಮ್ಮ ಸೂಪರ್ ಕಾಯಿನ್‌ಗಳೊಂದಿಗೆ ಶೇ 10ರ ವರೆಗೆ ರೆಡೀಮ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ವಿಭಾಗಗಳ ಆರಂಭದಿಂದ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವುದರ ಜೊತೆಗೆ ಬಿಲ್‌ ಪಾವತಿಸಬಹುದಾಗಿದೆ ಎಂದು ತಿಳಿಸಿದೆ.

‘ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ಸ್ ವಹಿವಾಟು ವೇಗವಾಗಿ ಬೆಳೆಯುತ್ತಿದೆ. ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್ ಸೌಲಭ್ಯಗಳನ್ನು ಸರಳೀಕರಣಗೊಳಿಸಲಾಗಿದೆ. ಸರ್ಕಾರದ ನಗದುರಹಿತ ಆರ್ಥಿಕತೆಯ ಉದ್ದೇಶದೊಂದಿಗೆ ಸೇವೆಗಳ ಆಯ್ಕೆಗಳನ್ನು ವೈವಿಧ್ಯಮಯಗೊಳಿಸಲಾಗಿದೆ. ಸುರಕ್ಷಿತ ಮತ್ತು ತಡೆರಹಿತ ವಹಿವಾಟಿಗೆ ಒನ್-ಸ್ಟಾಪ್ ತಾಣ ರಚಿಸಿದೆ’ ಎಂದು ಫ್ಲಿಪ್‌ಕಾರ್ಟ್‌ನ ಪೇಮೆಂಟ್ಸ್ ಆ್ಯಂಡ್‌ ಸೂಪರ್ ಕಾಯಿನ್ಸ್ ವಿಭಾಗದ ಉಪಾಧ್ಯಕ್ಷ ಗೌರವ್ ಅರೋರ ತಿಳಿಸಿದ್ದಾರೆ. 

ಈ ಸಹಯೋಗವು ಬಿಲ್‌ ಡೆಸ್ಕ್ ಮತ್ತು ಫ್ಲಿಪ್‌ಕಾರ್ಟ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಫ್ಲಿಪ್‌ಕಾರ್ಟ್‌ನ ಗ್ರಾಹಕರಿಗೆ ತಡೆರಹಿತ ಬಿಲ್ ಪೇಮೆಂಟ್‌ ಮಾಡಲು, ಸಕಾಲಕ್ಕೆ ನೋಟಿಫಿಕೇಶನ್‌ ಪಡೆಯಲು ಹಾಗೂ ಖಾತೆಯಲ್ಲಿರುವ ಹಣವನ್ನು ಪರೀಕ್ಷಿಸಿಕೊಳ್ಳಲು ನೆರವಾಗುತ್ತದೆ ಎಂದು ಬಿಲ್‌ಡೆಸ್ಕ್‌ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಅಜಯ್ ಕೌಶಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.