ADVERTISEMENT

ಹಬ್ಬಕ್ಕೂ ಮೊದಲೆ ಚಿನ್ನದ ಬೆಲೆ ಏರಿಕೆ: ಧನ್‌ತೇರಸ್‌ನಲ್ಲಿ ಆಭರಣಗಳ ಮಾರಾಟ ಕ್ಷೀಣ

ಪಿಟಿಐ
Published 22 ಅಕ್ಟೋಬರ್ 2024, 15:55 IST
Last Updated 22 ಅಕ್ಟೋಬರ್ 2024, 15:55 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ದೀ‍ಪಾವಳಿ ಹಬ್ಬಕ್ಕೂ ಮೊದಲೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಹಾಗಾಗಿ, ಈ ಬಾರಿಯ ಧನ್‌ತೇರಸ್‌ನಲ್ಲಿ ಚಿನ್ನಾಭರಣಗಳ ಮಾರಾಟ ಕಡಿಮೆಯಾಗಲಿದೆ ಎಂದು ಚಿನ್ನಾಭರಣ ವರ್ತಕರು ಹೇಳಿದ್ದಾರೆ.

ಪ್ರಸ್ತುತ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆಯು ₹80 ಸಾವಿರ ದಾಟಿದ್ದರೆ, ಪ್ರತಿ ಕೆ.ಜಿ ಬೆಳ್ಳಿ ಧಾರಣೆಯು ₹1 ಲಕ್ಷ ದಾಟಿದೆ.

ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿತ್ತು. ಇದರಿಂದ ಚಿನ್ನಾಭರಣಗಳ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂದಾಜಿಗೂ ಮೀರಿ ಏರಿಕೆಯಾಗಿದೆ ಎಂಬುದು ಉದ್ಯಮ ವಲಯದ ತಜ್ಞರ ಅಭಿಪ್ರಾಯ.

ADVERTISEMENT

‘ಕಳೆದ ಬಾರಿ ಧನ್‌ತೇರಸ್‌ನಲ್ಲಿ ಚಿನ್ನಾಭರಣ ವಹಿವಾಟು ಶೇ 10ರಿಂದ ಶೇ 12ರಷ್ಟು ಏರಿಕೆಯಾಗಿತ್ತು. ಸದ್ಯ ಬೆಲೆ ಏರುಗತಿಯಲ್ಲಿದೆ. ಈ ಬಾರಿ ಶೇ 12ರಿಂದ ಶೇ 15ರಷ್ಟು ವಹಿವಾಟು ನಡೆಯುವ ಸಾಧ್ಯತೆಯಿದೆ’ ಎಂದು ಸೆನ್ಕೊ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುವಂಕರ್ ಸೇನ್‌ ತಿಳಿಸಿದ್ದಾರೆ.

ಚಿನ್ನಾಭರಣಗಳ ಖರೀದಿಗೆ ಶುಭ ದಿನ ಎಂದು ಪರಿಗಣಿತವಾಗಿರುವ ಧನ್‌ತೇರಸ್‌ ಅನ್ನು ಅಕ್ಟೋಬರ್‌ 29ರಂದು ಆಚರಿಸಲಾಗುತ್ತದೆ.

ಮಧ್ಯಪ್ರಾಚ್ಯ ಬಿಕ್ಕಟ್ಟು ಸೇರಿ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಅನಿಶ್ಚಿತತೆಯಿಂದಾಗಿ ಹಳದಿ ಲೋಹದ ಬೆಲೆಯು ಏರಿಕೆಯಾಗಿದೆ. ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

‘ಸದ್ಯ ಚಿನ್ನಾಭರಣ ವಲಯದ ಸ್ಥಿತಿಗತಿ ಅವಲೋಕಿಸಿದರೆ ಕಳೆದ ಬಾರಿಯ ಧನ್‌ತೇರಸ್‌ನಲ್ಲಿ ನಡೆದಷ್ಟೇ ವಹಿವಾಟು ನಡೆಯುವ ಸಾಧ್ಯತೆಯಿದೆ’ ಎಂದು ಪಿ.ಎನ್‌. ಗಾಡ್ಗಿಲ್‌ನ ವ್ಯವಸ್ಥಾಪಕ ನಿರ್ದೇಶಕ ಸೌರಭ್‌ ಗಾಡ್ಗಿಲ್ ಹೇಳಿದ್ದಾರೆ.

‘ಧನ್‌ತೆರೇಸ್‌ ಅವಧಿಯಲ್ಲಿ ದೇಶದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮದುವೆಗಳು ನಡೆಯುತ್ತವೆ. ಈ ವೇಳೆ ಚಿನ್ನಾಭರಣ ಖರೀದಿ ಹೆಚ್ಚಿರುತ್ತದೆ. ದರ ಏರಿಕೆ ನಡುವೆಯೂ ಧನ್‌ತೆರೇಸ್‌ ದಿನದಂದು 20ರಿಂದ 22 ಟನ್‌ ಚಿನ್ನದ ಮಾರಾಟ ನಡೆಯುವ ಸಾಧ್ಯತೆಯಿದೆ’ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ಮಂಡಳಿ (ಜಿಜೆಸಿ) ಅಧ್ಯಕ್ಷ ಸಾಯಂ ಮೆಹ್ರಾ ಹೇಳಿದ್ದಾರೆ. 

‘ಒಂದು ರಾಷ್ಟ್ರ ಒಂದೇ ದರ ಅನುಷ್ಠಾನ’

ದೇಶೀಯವಾಗಿ ಚಿನ್ನದ ಏಕರೂಪ ದರ ನಿಗದಿಗೆ ಮಂಡಳಿಯು ನಿರ್ಧರಿಸಿದೆ. ಹಾಗಾಗಿ ‘ಒಂದು ರಾಷ್ಟ್ರ; ಒಂದೇ ಚಿನ್ನದ ದರ’ ಅನುಷ್ಠಾನಕ್ಕೆ ಕಾರ್ಯತತ್ಪರವಾಗಿದೆ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ಮಂಡಳಿಯ (ಜಿಜೆಸಿ) ಕಾರ್ಯದರ್ಶಿ ಮಿತೇಶ್ ಧೋರ್ಡಾ ತಿಳಿಸಿದ್ದಾರೆ. ಡಿಸೆಂಬರ್‌ 9ರ ವರೆಗೆ ನಡೆಯಲಿರುವ ವಾರ್ಷಿಕ ಚಿನ್ನದ ಹಬ್ಬವಾದ ‘ಲಕ್ಕಿ ಲಕ್ಷ್ಮೀ’ಗೆ ಮಂಗಳವಾರ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ‘ನಾವು ಒಂದೇ ದರದಲ್ಲಿ ಚಿನ್ನ ಆಮದು ಮಾಡಿಕೊಳ್ಳುತ್ತೇವೆ. ಆದರೆ ದೇಶದ ನಗರದಿಂದ ನಗರಕ್ಕೆ ಬೆಲೆಯಲ್ಲಿ ವ್ಯತ್ಯಾಸ ಇರುತ್ತದೆ. ದೇಶದಲ್ಲಿ ಏಕರೂಪ ದರ ಕಾಯ್ದುಕೊಳ್ಳುವ ಗುರಿ ಹೊಂದಿದ್ದೇವೆ’ ಎಂದರು. ಈಗಾಗಲೇ ಮಂಡಳಿಯು ಸದಸ್ಯರೊಟ್ಟಿಗೆ ಈ ಸಂಬಂಧ 50 ಸಭೆ ನಡೆಸಿದೆ. 8 ಸಾವಿರ ಆಭರಣ ವ್ಯಾಪಾರಿಗಳನ್ನು ಒಂದೇ ವೇದಿಕೆಗೆ ತರಲಾಗಿದೆ. 4ರಿಂದ 5 ಲಕ್ಷ ಆಭರಣ ವ್ಯಾಪಾರಿಗಳನ್ನು ಹಂತ ಹಂತವಾಗಿ ಈ ವೇದಿಕೆಯಡಿ ತರುವ ಕಾರ್ಯ ನಡೆದಿದೆ. ಆದರೆ ಗುಜರಾತ್‌ನಲ್ಲಿ ಇದರ ಅನುಷ್ಠಾನ ಸವಾಲಿನಿಂದ ಕೂಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.