ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬಜೆಟ್ ಪೂರ್ವ ಸಮಾಲೋಚನೆ ಕುರಿತ ಪ್ರಥಮ ಸಭೆ ನಡೆಯಿತು.
ದೇಶದ ಪ್ರಮುಖ ಅರ್ಥಶಾಸ್ತಜ್ಞರೊಟ್ಟಿಗೆ ನಿರ್ಮಲಾ ಅವರು, ಜುಲೈನಲ್ಲಿ ಮಂಡಿಸಲಿರುವ ಬಜೆಟ್ ಕುರಿತಂತೆ ಚರ್ಚಿಸಿದರು.
ಕೇಂದ್ರ ಸರ್ಕಾರವು ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಜೊತೆಗೆ ವಿತ್ತೀಯ ಕೊರತೆ ತಗ್ಗಿಸಲು ಕ್ರಮವಹಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಸಲಹೆ ನೀಡಿದ್ದಾರೆ.
ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಸಚಿವಾಲಯದ ಕಾರ್ಯದರ್ಶಿ, ವಿವಿಧ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಮುಖ್ಯ ಆರ್ಥಿಕ ಸಲಹೆಗಾರರು ಪಾಲ್ಗೊಂಡಿದ್ದರು.
‘ಸಭೆಯಲ್ಲಿ ಪಾಲ್ಗೊಂಡಿದ್ದ ಅರ್ಥಶಾಸ್ತ್ರಜ್ಞರು ಬಜೆಟ್ ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ’ ಎಂದು ಅರ್ಥಶಾಸ್ತ್ರಜ್ಞ ಅಶ್ವನಿ ಮಹಾಜನ್ ತಿಳಿಸಿದ್ದಾರೆ.
ವಿತ್ತೀಯ ಕೊರತೆ ಎಷ್ಟು?:
ವರಮಾನ ಮತ್ತು ವೆಚ್ಚದ ನಡುವಣ ಅಂತರವಾದ ವಿತ್ತೀಯ ಕೊರತೆಯು 2023–24ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇ 5.8ರಷ್ಟಿತ್ತು. ಇದನ್ನು 2024–25ರಲ್ಲಿ ಶೇ 5.1ಕ್ಕೆ ಹಾಗೂ 2025–26ನೇ ಆರ್ಥಿಕ ವರ್ಷದಲ್ಲಿ ಶೇ 4.5ಕ್ಕೆ ಇಳಿಸಲು ಫೆಬ್ರುವರಿಯಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್‌ನಲ್ಲಿ ನಿರ್ಮಲಾ ಪ್ರಸ್ತಾಪಿಸಿದ್ದರು.
ಕೇಂದ್ರವು ಬಂಡವಾಳ ವೆಚ್ಚಕ್ಕೆ ಉತ್ತೇಜನ ನೀಡಿದ್ದು, ವಿತ್ತೀಯ ಕೊರತೆಯ ನಿಯಂತ್ರಣಕ್ಕೆ ಕ್ರಮವಹಿಸಿದೆ. 2023–24ನೇ ಆರ್ಥಿಕ ವರ್ಷದಲ್ಲಿ ಸರ್ಕಾರದ ಬಂಡವಾಳ ವೆಚ್ಚ ₹9.5 ಲಕ್ಷ ಕೋಟಿ ಆಗಿದ್ದು, 2024–25ನೇ ಆರ್ಥಿಕ ವರ್ಷದಲ್ಲಿ ₹11.11 ಲಕ್ಷ ಕೋಟಿಗೆ ಗುರಿ ನಿಗದಿಪಡಿಸಲಾಗಿದೆ.
ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರಕ್ಕೆ ₹2.11 ಲಕ್ಷ ಕೋಟಿ ಲಾಭಾಂಶ ನೀಡಿರುವುದು, ಬಂಡವಾಳ ವೆಚ್ಚ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಇದು ವಿತ್ತೀಯ ಕೊರತೆ ಪ್ರಮಾಣವನ್ನು ತಗ್ಗಿಸಲು ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಜೂನ್ 20ರಂದು ದೇಶದ ಕೈಗಾರಿಕಾ ಒಕ್ಕೂಟಗಳ ಜೊತೆಗೆ ನಿರ್ಮಲಾ ಅವರು ಸಭೆ ನಡೆಸುವ ಸಾಧ್ಯತೆಯಿದೆ.
ಬಜೆಟ್ ಮಂಡನೆ ದಾಖಲೆ:
ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಅವರು 1959–1964ರ ನಡುವೆ ಐದು ಬಾರಿ ವಾರ್ಷಿಕ ಹಾಗೂ ಒಂದು ಮಧ್ಯಂತರ ಬಜೆಟ್ ಮಂಡಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ನಿರ್ಮಲಾ ಅವರು ಸತತ ಆರು ಬಾರಿ ಬಜೆಟ್ ಮಂಡಿಸುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.
2024–25ನೇ ಆರ್ಥಿಕ ಸಾಲಿನ ಬಜೆಟ್ ಮಂಡಿಸಿದರೆ ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಿದ ಮೊದಲ ಸಚಿವೆ ಎಂಬ ಚಾರಿತ್ರಿಕ ದಾಖಲೆ ಬರೆಯಲಿದ್ದಾರೆ. ಸತತ ಎರಡನೇ ಬಾರಿಗೆ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ಹಿರಿಮೆಯನ್ನೂ ಅವರು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.