ADVERTISEMENT

ನಿಕೋಟಿನ್‌ ಅಂಶ ಇಳಿಕೆ: ತಂಬಾಕು ದರ ಕುಸಿತ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 21:54 IST
Last Updated 14 ನವೆಂಬರ್ 2024, 21:54 IST
   

ಹುಣಸೂರು (ಮೈಸೂರು ಜಿಲ್ಲೆ): ‘ರಾಜ್ಯದಲ್ಲಿ ಕಳೆದ ಸಾಲಿನಡಿ ಹೆಚ್ಚು ಮಳೆಯಾಗಿದ್ದರಿಂದ ತಂಬಾಕಿನಲ್ಲಿ ನಿಕೋಟಿನ್ ಅಂಶ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ, ಕಂಪನಿಗಳು ಹೆಚ್ಚಿನ ದರಕ್ಕೆ ಖರೀದಿಸಲು ಹಿಂದೇಟು ಹಾಕಿವೆ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ತಾಲ್ಲೂಕಿನ ಕಟ್ಟೆಮಳಲವಾಡಿಯ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಗುರುವಾರ ನಡೆದ ತಂಬಾಕು ಬೆಳೆಗಾರರ ಸಭೆಯಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಎರಡನೇ ದರ್ಜೆ ತಂಬಾಕಿಗೆ ಕಂಪನಿಗಳು ವೈಜ್ಞಾನಿಕ ದರ ನೀಡುತ್ತಿಲ್ಲ ಎಂಬ ಆರೋಪದ ಬಗ್ಗೆ ಮಂಡಳಿಯ ಅಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ನಿಕೋಟಿನ್ ಅಂಶ ಗಣನೀಯವಾಗಿ ಕುಸಿದಿದ್ದರಿಂದಲೇ ಹೊರ ದೇಶದಲ್ಲಿ ಬೇಡಿಕೆ ಇಲ್ಲ ಎಂಬ ಕಾರಣ ನೀಡಿದ್ದಾರೆ. ಇದಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ’ ಎಂದರು.

ADVERTISEMENT

‘ಬೆಳೆಗಾರ ನಿಧನರಾದರೆ, ತಂಬಾಕು ಬೆಳೆಗಾರ ಕಲ್ಯಾಣ ನಿಧಿಯಿಂದ ಕುಟುಂಬದವರಿಗೆ ನೀಡಲಾಗುವ ₹ 50 ಸಾವಿರ ಪರಿಹಾರವನ್ನು ₹ 1 ಲಕ್ಷಕ್ಕೆ ಹೆಚ್ಚಿಸಲು ಕೋರಿದ್ದೇನೆ. ತಂಬಾಕು ವಾಣಿಜ್ಯ ಬೆಳೆ ಎಂಬ ಕಾರಣಕ್ಕೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಿಂದ ಕೈ ಬಿಡಲಾಗಿತ್ತು. ಈ ಸಂಬಂಧ ಪ್ರಧಾನಿಯೊಂದಿಗೆ ಚರ್ಚಿಸಿ ತಂಬಾಕು ಸೇರ್ಪಡೆಗೆ ಕ್ರಮ ವಹಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.