ADVERTISEMENT

ರಿಲಯನ್ಸ್‌ನಿಂದ ಬೋನಸ್‌ ಷೇರು ಪ್ರಕಟ

ಪಿಟಿಐ
Published 29 ಆಗಸ್ಟ್ 2024, 15:30 IST
Last Updated 29 ಆಗಸ್ಟ್ 2024, 15:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ರಿಲಯನ್ಸ್‌ ಇಂಡಸ್ಟ್ರಿಸ್‌ ಲಿಮಿಟೆಡ್‌ ತನ್ನ ಷೇರುದಾರರಿಗೆ 1:1 ಅನುಪಾತದಲ್ಲಿ ಬೋನಸ್‌ ಷೇರು ನೀಡುವುದಾಗಿ ಪ್ರಕಟಿಸಿದೆ. 

ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡುವ ಬಗ್ಗೆ ಗುರುವಾರ ನಡೆದ ಕಂಪನಿಯ 74ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಸೆಪ್ಟೆಂಬರ್ 5ರಂದು ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ಅನುಮೋದನೆ ನೀಡುವ ಸಾಧ್ಯತೆಯಿದೆ.

2017ರ ಬಳಿಕ ಮೊದಲ ಬಾರಿಗೆ ಕಂಪನಿಯು ಬೋನಸ್‌ ಷೇರು ವಿತರಿಸುತ್ತಿದೆ.

ADVERTISEMENT

100 ಜಿ.ಬಿ ಕ್ಲೌಡ್ ಸಂಗ್ರಹ:

ಸಭೆಯಲ್ಲಿ ಮಾತನಾಡಿದ ಕಂಪನಿಯ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ, ‘ಶೀಘ್ರವೇ, ರಿಲಯನ್ಸ್ ಜಿಯೊ ತನ್ನ ಗ್ರಾಹಕರಿಗೆ 100 ಜಿ.ಬಿವರೆಗೆ ಉಚಿತವಾಗಿ ಕ್ಲೌಡ್ ಸಂಗ್ರಹ ನೀಡಲಿದೆ. ಇದರಲ್ಲಿ ಫೋಟೊ, ವಿಡಿಯೊ ಅಥವಾ ಡಾಕ್ಯುಮೆಂಟ್‌ಗಳನ್ನು ಸಂಗ್ರಹಿಸಬಹುದಾಗಿದೆ’ ಎಂದು ತಿಳಿಸಿದರು.

ಅಲ್ಲದೆ, ಜಿಯೊ ಬ್ರೈನ್ ಕೃತಕ ಬುದ್ಧಿಮತ್ತೆ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಜಿಯೊ ಸಂಪೂರ್ಣವಾಗಿ ಎ.ಐ ಒಳಗೊಂಡ ಪರಿಕರಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.

ಗುಜರಾತ್‌ನ ಜಾಮ್‌ನಗರದಲ್ಲಿ ಪ್ರಸಕ್ತ ವರ್ಷದಲ್ಲಿ ಸೌರ ಗಿಗಾ ಫ್ಯಾಕ್ಟರಿ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇದು ಕೃತಕ ಬುದ್ಧಿಮತ್ತೆ ಆಧಾರಿತ ಡೇಟಾ ಕೇಂದ್ರವಾಗಿದೆ. ರಿಲಯನ್ಸ್‌ನ ಹಸಿರು ಶಕ್ತಿಯಿಂದ ಇದು ಚಾಲಿತವಾಗಲಿದೆ. ಭಾರತದಲ್ಲಿ ಎ.ಐ ಅಪ್ಲಿಕೇಷನ್‌ಗಳನ್ನು ಕೈಗೆಟುಕುವಂತೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.