ನವದೆಹಲಿ: ದೇಶದ ಅತಿದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ‘ಭಾರತದ ಅತ್ಯುತ್ತಮ ಉದ್ಯೋಗದಾತ ಮತ್ತು ಕೆಲಸ ಮಾಡಲು ವಿಶ್ವದ 20ನೇ ಅತ್ಯುತ್ತಮ ಸಂಸ್ಥೆ’ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಫೋಬ್ಸ್ ನಿಯತಕಾಲಿಕವು ‘2022ರ ವಿಶ್ವದ ಅತ್ಯುತ್ತಮ ಉದ್ಯೋಗದಾತ’ರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನದಲ್ಲಿದೆ. ಅಮೆರಿಕದ ಮೈಕ್ರೊಸಾಫ್ಟ್, ಐಬಿಎಂ, ಆಲ್ಫಾಬೆಟ್ ಮತ್ತು ಆ್ಯಪಲ್ ಕಂಪನಿಗಳು ನಂತರದ ಸ್ಥಾನ ಪಡೆದಿವೆ.
ಅಮೆರಿಕದ ಕಂಪನಿಗಳು 2ರಿಂದ 12ರವರೆಗಿನ ಸ್ಥಾನಗಳನ್ನು ಪಡೆದುಕೊಂಡಿವೆ. ಜರ್ಮನಿಯ ಬಿಎಂಡಬ್ಲ್ಯು ಸಮೂಹವು 13ನೇ ಸ್ಥಾನದಲ್ಲಿದೆ. ಜಗತ್ತಿನ ಅತಿದೊಡ್ಡ ಆನ್‌ಲೈನ್ ರಿಟೇಲ್ ಮಾರಾಟ ಕಂಪನಿ ಅಮೆಜಾನ್ 14ನೇ ಸ್ಥಾನ ಪಡೆದುಕೊಂಡಿದೆ. ಡೆಕತ್ಲಾನ್ 15ನೇ ಸ್ಥಾನದಲ್ಲಿದೆ.
ರಿಲಯನ್ಸ್ ಕಂಪನಿಯಲ್ಲಿ ಒಟ್ಟು 2.30 ಲಕ್ಷ ಉದ್ಯೋಗಿಗಳಿದ್ದು, ಈ ಕಂಪನಿಯು ಜರ್ಮನಿಯ ಮರ್ಸಿಡಿಸ್ ಬೆಂಜ್, ಅಮೆರಿಕದ ಕೋಕಾ ಕೋಲಾ, ಜಪಾನ್‌ನ ಹೋಂಡಾ ಮತ್ತು ಯಮಹಾ ಹಾಗೂ ಸೌದಿ ಅರೇಬಿಯಾದ ಆರಾಮ್ಕೊ ಕಂಪನಿಗಳಿಗಿಂತಲೂ ಮೇಲಿನ ಸ್ಥಾನವನ್ನು ಹೊಂದಿದೆ.
ಮೊದಲ 100 ಕಂಪನಿಗಳ ಸಾಲಿನಲ್ಲಿ ರಿಲಯನ್ಸ್ ಹೊರತುಪಡಿಸಿದರೆ ಭಾರತದ ಇನ್ನಾವುದೇ ಕಂಪನಿಯೂ ಸ್ಥಾನ ಪಡೆದಿಲ್ಲ. ಎಚ್‌ಡಿಎಫ್‌ಸಿ ಬ್ಯಾಂಕ್ (137), ಆದಿತ್ಯ ಬಿರ್ಲಾ ಸಮೂಹ (240), ಹೀರೊ ಮೊಟೊಕಾರ್ಪ್ (333), ಲಾರ್ಸನ್ ಆ್ಯಂಡ್ ಟೂಬ್ರೊ (354), ಐಸಿಐಸಿಐ ಬ್ಯಾಂಕ್ (365), ಎಚ್‌ಸಿಎಲ್ ಟೆಕ್ನಾಲಜೀಸ್ (455), ಎಸ್‌ಬಿಐ (499), ಅದಾನಿ ಎಂಟರ್‌ಪ್ರೈಸಸ್ (547) ಮತ್ತು ಇನ್ಫೊಸಿಸ್ (668) ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಇತರ ಕಂಪನಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.