ಮುಂಬೈ: ಸಿನಿಮಾಗಳ ಮೊದಲ ದಿನದ ಮೊದಲ ಪ್ರದರ್ಶನವನ್ನು ಮನೆಯ ಟೀವಿನಲ್ಲಿಯೇ ವೀಕ್ಷಿಸುವ, ಅಗ್ಗದ ದರದ ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್, ಉಚಿತ ಕರೆಗಳ ಸ್ಥಿರ ದೂರವಾಣಿ ಸೇವೆಯಂತಹ ಹತ್ತಾರು ಆಕರ್ಷಕ ಕೊಡುಗೆಗಳ ರಿಲಯನ್ಸ್ ಜಿಯೊ ಫೈಬರ್ ಸೇವೆಯು ಸೆಪ್ಟೆಂಬರ್ 5ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ.
‘ಫೈಬರ್ ಟು ದ ಹೋಂ’ (ಎಫ್‌ಟಿಟಿಎಚ್) ಸೇವೆಯಡಿ ಕನಿಷ್ಠ 100 ಎಂಬಿಪಿಎಸ್ ಮತ್ತು ಗರಿಷ್ಠ 1,000 ಎಂಬಿಪಿಎಸ್ (1 ಜಿಬಿಪಿಎಸ್) ಬ್ರಾಡ್‌ಬ್ಯಾಂಡ್ ಸೌಲಭ್ಯ. ಮಾಸಿಕ ಶುಲ್ಕ ಕನಿಷ್ಠ 700 ರಿಂದ ಗರಿಷ್ಠ ₹ 10 ಸಾವಿರವರೆಗಿನ ಆಕರ್ಷಕ ಸೌಲಭ್ಯ. ಡಿಜಿಟಲ್ ಸಾಧನಗಳು ಪರಸ್ಪರ ಸಂಪರ್ಕ ಸಾಧಿಸುವ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಜಿಯೊ ಹೋಂ ಟಿವಿ ಸೇವೆ ಪರಿಚಯಿಸಲಾಗುತ್ತಿದೆ.
ಎಚ್‌ಡಿ ಟಿವಿಯಲ್ಲಿ ವಿಶಿಷ್ಟ ಅನುಭವ ನೀಡುವ ಮನರಂಜನೆ ಕಾರ್ಯಕ್ರಮ, ಧ್ವನಿ ಆಧಾರಿತ ಸೇವೆಗಳು, ಗೇಮಿಂಗ್, ಡಿಜಿಟಲ್ ಶಾಪಿಂಗ್ ಮತ್ತು ಸ್ಮಾರ್ಟ್ ಹೋಂ ಸೌಲಭ್ಯಗಳನ್ನು ಇದು ಒಳಗೊಂಡಿರಲಿದೆ.
ಉಚಿತ ಕರೆ ಸೌಲಭ್ಯ: ಜಿಯೊಫೈಬರ್ ಸಂಪರ್ಕದ ಜೊತೆಗೆ ಲ್ಯಾಂಡ್‌ಲೈನ್ ಫೋನ್ ಸಂಪರ್ಕ ಒದಗಿಸಲಾಗುವುದು. ಇದರಿಂದ ಮಾಡುವ ಸ್ಥಳೀಯ ಹಾಗೂ ದೇಶೀಯ ಕರೆಗಳು ಉಚಿತವಾಗಿರುತ್ತವೆ. ಮಾಸಿಕ ₹ 500ಕ್ಕೆ ಅಮೆರಿಕ ಮತ್ತು ಕೆನಡಾಕ್ಕೆ ಮಿತಿರಹಿತ ಅಂತರರಾಷ್ಟ್ರೀಯ ಕರೆಗಳನ್ನು ಮಾಡಬಹುದು.
ಸೆ. 5ಕ್ಕೆ ಚಾಲನೆ: ಬಹುನಿರೀಕ್ಷಿತ ಜಿಯೊಫೈಬರ್‌ನ ವಾಣಿಜ್ಯ ಸೇವೆಗೆ ಸೆ. 5ರಂದು ಚಾಲನೆ ನೀಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಇಲ್ಲಿ ಸೋಮವಾರ ನಡೆದ ಸಂಸ್ಥೆಯ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಲಭ್ಯ ಇರುವ ಸೇವೆಗಳ ಸಂಪೂರ್ಣ ದರ ವಿವರವು ಅಂದೇ ಪ್ರಕಟಗೊಳ್ಳಲಿದೆ.
ಈ ಸೇವೆಯ ಬಳಕೆದಾರರಿಗೆ ಹೆಚ್ಚುವರಿ ಸೌಲಭ್ಯಗಳ ‘ಜಿಯೊ ಪೋಸ್ಟ್ ಪೇಡ್ ಪ್ಲಸ್’ ಮೊಬೈಲ್ ಸೇವೆ ಪರಿಚಯಿಸಲಾಗುತ್ತಿದೆ. ಆರಂಭಿಕ ಕೊಡುಗೆಯಡಿ ಜಿಯೊ-ಫಾರೆವರ್ ವಾರ್ಷಿಕ ಪ್ಲ್ಯಾನ್ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಎಚ್‌ಡಿ ಅಥವಾ 4ಕೆ ಎಲ್‌ಇಡಿ ಟಿವಿ ಹಾಗೂ ಸೆಟ್ ಟಾಪ್ ಬಾಕ್ಸ್ ಅನ್ನು ಉಚಿತವಾಗಿ ವಿತರಿಸಲಾಗುವುದು.
ಡಿಜಿಟಲ್ ಬದಲಾವಣೆ ತ್ವರಿತಗೊಳಿಸಲು ಮೈಕ್ರೊಸಾಫ್ಟ್ ಜತೆ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳಲಿದೆ. ಸಣ್ಣ ಮತ್ತು ಮಧ್ಯಮ (ಎಸ್‌ಎಂಬಿ) ಮತ್ತು ದೊಡ್ಡ ಕೈಗಾರಿಕಾ ಗ್ರಾಹಕರಿಗೂ ಸೇವೆ ವಿಸ್ತರಿಸಲು ಜಿಯೊ ಉದ್ದೇಶಿಸಿದೆ. ದೇಶದಲ್ಲಿನ 1,600 ನಗರ – ಪಟ್ಟಣಗಳಲ್ಲಿನ 2 ಕೋಟಿ ಮನೆಗಳು ಮತ್ತು 1.5 ಕೋಟಿ ಸಂಸ್ಥೆಗಳಿಗೆ ಈ ಸೇವೆ ಒದಗಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.