ADVERTISEMENT

ಇಂದಿನಿಂದ ಜಿಯೊ ಫೈಬರ್‌ ಸಂಪರ್ಕ ಸೇವೆ; 4ಕೆ ಟಿವಿ ಉಚಿತ?

ಕನಿಷ್ಠ ದರ ₹700

ಏಜೆನ್ಸೀಸ್
Published 5 ಸೆಪ್ಟೆಂಬರ್ 2019, 10:53 IST
Last Updated 5 ಸೆಪ್ಟೆಂಬರ್ 2019, 10:53 IST
   

ಬೆಂಗಳೂರು:’ಜಿಯೊ‘ ಮೂಲಕ ನಿತ್ಯ 1 ಜಿಬಿ ಡಾಟಾ ಮತ್ತು ಉಚಿತ ಕರೆ ಕೊಡುಗೆಯಿಂದ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ರಿಲಯನ್ಸ್‌ ಗುರುವಾರ ಅಧಿಕೃತವಾಗಿಜಿಯೊಫೈಬರ್‌ ವಾಣಿಜ್ಯ ಸೇವೆ ಆರಂಭಿಸುತ್ತಿದೆ. ಇದರಿಂದಾಗಿ ಮನರಂಜನ ಕ್ಷೇತ್ರ ಹಾಗೂ ಟಿವಿ ಕಾರ್ಯಕ್ರಮಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ ನೋಂದಣಿ ಮಾಡಿರುವ ಬಳಕೆದಾರರು ಸೆ.5ರಿಂದ ಹೈಸ್ಪೀಡ್‌ ಇಂಟರ್‌ನೆಟ್‌ ಸಂಪರ್ಕ ಪಡೆಯಲಿದ್ದಾರೆ. ಅತಿ ಕಡಿಮೆ ದರದಲ್ಲಿ ವೇಗದ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವ ಯೋಜನೆ ಕುರಿತು ಪ್ರಕಟಣೆಯನ್ನು ಆಗಸ್ಟ್‌ 12ರಂದುರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್‌) ಅಧ್ಯಕ್ಷ ಮುಕೇಶ್ ಅಂಬಾನಿ ಮಾಡಿದ್ದರು.

ಜಿಯೊ ಫೈಬರ್‌ ಇಂಟರ್‌ನೆಟ್‌ ಸಂಪರ್ಕದ ಜತೆಗೆ ಲ್ಯಾಂಡ್‌ ಲೈನ್‌ ಫೋನ್‌ ಸಂಪರ್ಕ, ಗೇಮಿಂಗ್‌ಗಾಗಿ ಸೆಟ್‌–ಟಾಪ್‌–ಬಾಕ್ಸ್‌ ಕೇಬಲ್‌, ಉಚಿತ 4ಕೆ ಟಿವಿ ಹಾಗೂ ಜಿಯೊಇಂಟರ್‌ನೆಟ್‌ ಆಫ್‌ ಥಿಂಗ್ಸ್ (ಐಒಟಿ) ಸೇವೆಗಳು ದೊರೆಯಲಿವೆ.

ADVERTISEMENT

ಜಿಯೊ ಫೈಬರ್‌ ಸಂಪರ್ಕದ ಕುರಿತ ವಿವರಇಲ್ಲಿದೆ:

* ತಿಂಗಳಿಗೆ ₹700

ಈವರೆಗೆ ರಿಲಯನ್ಸ್‌ ‘ಜಿಯೊಫೈಬರ್‌‘ನ ಎರಡು ಪ್ಲಾನ್‌ಗಳನ್ನು ಮಾತ್ರ ಪ್ರಕಟಿಸಿದೆ. ತಿಂಗಳಿಗೆ ₹700ಕ್ಕೆ ದೊರೆಯುವ ಸಂಪರ್ಕದಲ್ಲಿ 100 ಎಂಬಿಪಿಎಸ್‌ ವೇಗದಇಂಟರ್‌ನೆಟ್‌ ಪಡೆಯಬಹುದು. ಇನ್ನೊಂದು ಯೋಜನೆಗೆ ತಿಂಗಳಿಗೆ ₹10,000 ನೀಡಬೇಕು. ಈ ಯೋಜನೆಯ ಆಯ್ಕೆಯಲ್ಲಿ ಸಂಪರ್ಕ ಪಡೆಯುವವರು ಪ್ರತಿ ಸೆಕೆಂಡ್‌ಗೆ 1 ಜಿಬಿ ವೇಗದ ಇಂಟರ್‌ನೆಟ್‌ ಪಡೆಯಬಹುದು.

* ಪ್ರಮುಖ ನಗರಗಳಲ್ಲಿ ಮಾತ್ರ!

ಪ್ರಸ್ತುತ ಜಿಯೊ ಫೈಬರ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕ ದೇಶದ ಪ್ರಮುಖ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಲಭ್ಯವಾಗಲಿದೆ. ಗಿಗಾ ಜಿಯೊ ಫೈಬರ್‌ ಸಂಪರ್ಕವು ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಜೈಪುರ, ಹೈದರಾಬಾದ್‌, ಸೂರತ್‌, ವಡೋದರಾ, ಚೆನ್ನೈ, ನೋಯ್ಡಾ, ಗಾಜಿಯಾಬಾದ್‌, ಭುವನೇಶ್ವರ್‌, ವಾರಾಣಸಿ, ಅಲಹಾಬಾದ್‌, ಆಗ್ರಾ, ಮೀರತ್‌, ವೈಝಾಗ್‌, ಲಖನೌ, ಜಮ್‌ಷೆಡ್‌ಪುರ, ಹರಿದ್ವಾರ, ಗಯಾ, ಪಟನಾ, ಪೋರ್ಟ್‌ ಬ್ಲೇರ್‌, ಪಂಜಾಬ್‌ ಸೇರಿದಂತೆ ಹಲವು ಪಟ್ಟಣಗಳಲ್ಲಿ ವೇಗದ ಜಿಯೊ ಫೈಬರ್‌ ಇಂಟರ್‌ನೆಟ್‌ ಸಂಪರ್ಕ ಸಿಗಲಿದೆ.

* ನೋಂದಣಿ ಹೀಗೆ...

ಜಿಯೊ ಗಿಗಾಫೈಬರ್‌(gigafiber.jio.com/registration) ವೆಬ್‌ಸೈಟ್‌ಗೆ ಭೇಟಿ ನೀಡಿ, ನಿವಾಸ ಪ್ರದೇಶ ಅಥವಾ ಕಾರ್ಯನಿರ್ವಹಿಸುವ ಸ್ಥಳವನ್ನು ಗುರುತು ಮಾಡಿ ಇಂಟರ್‌ನೆಟ್‌ ಸಂಪರ್ಕ ಪಡೆಯಲು ನೋಂದಾಯಿಸಿಕೊಳ್ಳಬಹುದು. ವಿಳಾಸ, ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನು ನೀಡಬೇಕು. ಬಳಿಕ ಮೊಬೈಲ್‌ ಸಂಖ್ಯೆಗೆ ರವಾನೆಯಾಗುವ ಒಟಿಪಿ(ಒನ್‌ ಟೈಮ್‌ ಪಾಸ್‌ವರ್ಡ್‌) ನಮೂದಿಸಬೇಕು. ಈ ಮೂಲಕ ನೋಂದಣಿ ಪರಿಶೀಲನೆಯಾಗುತ್ತದೆ.

ನೋಂದಣಿಯ ಬಳಿಕ ನಿಮ್ಮ ಪ್ರದೇಶದಲ್ಲಿ ಈಗಾಗಲೇ ಜಿಯೊ ಫೈಬರ್‌ ಸಂಪರ್ಕ ಚಾಲ್ತಿಯಲ್ಲಿದ್ದರೆ, ಸಂಸ್ಥೆ ನಿಮ್ಮ ಮನವಿ ಮೇರೆಗೆ ರೂಟರ್‌ ಅಳವಡಿಸುತ್ತದೆ. ಮನೆಯಲ್ಲಿ ರೂಟರ್‌ ಅಳವಡಿಸಿ ಎರಡು ಗಂಟೆಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಪೂರೈಕೆಯಾಗುತ್ತದೆ. ನೀವಿರುವ ಪ್ರದೇಶ ಜಿಯೊ ಫೈಬರ್‌ ಲೈನ್ ವ್ಯಾಪ್ತಿಗೆ ಒಳಪಟ್ಟಿದ್ದರೆ ಮಾತ್ರ ಸಂಸ್ಥೆಯಿಂದ ನಿಮಗೆ ಕರೆ ಬರುತ್ತದೆ.

* ₹2,500 ನೀಡಬೇಕು

ಇಂಟರ್‌ನೆಟ್‌ ಸಂಪರ್ಕ ಪಡೆಯಲು ರೂಟರ್‌ ಅತ್ಯಗತ್ಯ. ಗ್ರಾಹಕರಿಗೆ ಜಿಯೊ ಫೈಬರ್‌ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಉಚಿತವಾಗಿ ನೀಡಿದರೂ ರೂಟರ್‌ಗೆ ₹2,500 ನೀಡಬೇಕು. ಇದು ಬಳಕೆದಾರರು ಹಿಂಪಡೆಯಬಹುದಾದ ಮೊತ್ತವಾಗಿರುತ್ತದೆ.

* ಗೇಮ್‌ ಮತ್ತು ಟಿವಿ ಕಾರ್ಯಕ್ರಮ

ಜಿಯೊ ಪರಿಚಯಿಸಿರುವ ಹೊಸ ರೀತಿಯ ಸೆಟ್‌–ಟಾ‍ಪ್‌–ಬಾಕ್ಸ್(ಎಸ್‌ಟಿಬಿ)ನಿಂದ ಟಿವಿ ಕಾರ್ಯಕ್ರಮಗಳ ಜತೆಗೆ ಎಚ್‌ಡಿ ಗೇಮ್‌ ಆಡಲೂ ಸಹ ಸಾಧ್ಯವಾಗಲಿದೆ. ಸ್ಥಳೀಯ ಕೇಬರ್‌ ಆಪರೇಟರ್‌ಗಳು ನೀಡುವ ಎಲ್ಲ ಟಿವಿ ಚಾನೆಲ್‌ಗಳನ್ನು ವೀಕ್ಷಿಸಬಹುದಾಗಿದೆ. ವಿಡಿಯೊ ಕಾಲಿಂಗ್‌, ವರ್ಚುವಲ್‌ ರಿಯಾಲಿಟಿ(ವಿಆರ್‌) ಮತ್ತು ಮಿಕ್ಸಡ್‌ ರಿಯಾಲಿಟಿ(ಎಂಆರ್‌) ಹಾಗೂ ಗೇಮಿಂಗ್‌ ಸೇವೆಯೂ ಸಿಗಲಿದೆ.

* ಉಚಿತ ಕೊಡುಗೆ

ಜಿಯೊ ಸಿನಿಮಾ, ಜಿಯೊ ಟಿವಿ ಹಾಗೂ ಜಿಯೊಸಾವನ್‌ ಆ್ಯಪ್‌ಗಳ ಮೂಲಕ ಕಾರ್ಯಕ್ರಮಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಸಿನಿಮಾ ಬಿಡುಗಡೆಯಾಗುವ ದಿನವೇ ಮನೆಯಲ್ಲಿ ಚಿತ್ರವನ್ನು ವೀಕ್ಷಿಸುವ ಸೌಲಭ್ಯ ಜಿಯೊ ಫೈಬರ್‌ ಪ್ರೀಮಿಯಂ ಗ್ರಾಹಕರಿಗೆ ಲಭ್ಯವಿರಲಿದೆ. ಉಚಿತ 4ಕೆ ಎಲ್‌ಇಡಿ ಟಿವಿ ಮತ್ತು 4ಕೆ ಸೆಟ್‌–ಟಾ‍ಪ್‌–ಬಾಕ್ಸ್‌ನ್ನು ಗ್ರಾಹಕರಿಗೆ ಆರಂಭಿಕ ಕೊಡುಗೆಯಾಗಿ ಉಚಿತವಾಗಿ ನೀಡುತ್ತಿದೆ.

ಮೊದಲ ಎರಡು ತಿಂಗಳ ಜಿಯೊ ಫೈಬರ್‌ ಸೇವೆಗಳು ಗ್ರಾಹಕರಿಗೆ ಉಚಿತವಾಗಿ ದೊರೆಯಲಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಜಿಯೊ ಫೈಬರ್‌ ಸೇವೆಗಾಗಿ ತವಕ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.