ADVERTISEMENT

ಕೇಬಲ್ ಬ್ರಾಡ್‌ಬ್ಯಾಂಡ್ ಸೇವೆ: ಮೊದಲ ಸ್ಥಾನಕ್ಕೆ ಜಿಯೊ

ಪಿಟಿಐ
Published 19 ಜನವರಿ 2022, 12:14 IST
Last Updated 19 ಜನವರಿ 2022, 12:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವುದನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ರಿಲಯನ್ಸ್ ಜಿಯೊ ಕಂಪನಿಯು, ಈ ವಲಯದಲ್ಲಿ ಮುಂಚೂಣಿ ಸ್ಥಾನಕ್ಕೆ ಬಂದಿದೆ. 20 ವರ್ಷಗಳಿಂದ ಈ ವಲಯದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕಂಪನಿಯನ್ನು ಜಿಯೊ ಎರಡನೆಯ ಸ್ಥಾನಕ್ಕೆ ತಳ್ಳಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ತಿಂಗಳ ಅಂಕಿ–ಅಂಶಗಳ ಪ್ರಕಾರ, ಜಿಯೊ ಕಂಪನಿಯು ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಕ್ಷೇತ್ರದಲ್ಲಿ 43.4 ಲಕ್ಷ ಗ್ರಾಹಕರನ್ನು ಹೊಂದಿ ಮೊದಲ ಸ್ಥಾನದಲ್ಲಿ ಇದೆ.

ಕೇಬಲ್ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ಅಕ್ಟೋಬರ್‌ನಲ್ಲಿ 41.6 ಲಕ್ಷ ಗ್ರಾಹಕರನ್ನು ಹೊಂದಿದ್ದ ಜಿಯೊ, ನವೆಂಬರ್‌ನಲ್ಲಿ ಗ್ರಾಹಕರ ಒಟ್ಟು ಸಂಖ್ಯೆಯನ್ನು 43.4 ಲಕ್ಷಕ್ಕೆ ಹೆಚ್ಚಿಸಿಕೊಂಡಿದೆ. ಅಕ್ಟೋಬರ್‌ನಲ್ಲಿ 47.2 ಲಕ್ಷ ಇದ್ದ ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆ ನವೆಂಬರ್‌ನಲ್ಲಿ 42 ಲಕ್ಷಕ್ಕೆ ಇಳಿಕೆಯಾಗಿದೆ. ಭಾರ್ತಿ ಏರ್‌ಟೆಲ್‌ನ ಗ್ರಾಹಕರ ಸಂಖ್ಯೆಯು ನವೆಂಬರ್‌ನಲ್ಲಿ 40.8 ಲಕ್ಷ ಆಗಿತ್ತು.

ADVERTISEMENT

ಜಿಯೊ ಕಂಪನಿಯು ತನ್ನ ಕೇಬಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ವಾಣಿಜ್ಯ ಬಳಕೆಗೆ 2019ರ ಸೆಪ್ಟೆಂಬರ್‌ನಲ್ಲಿ ಮುಕ್ತವಾಗಿಸಿತು. ಆ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್‌ ಒಟ್ಟು 86.9 ಲಕ್ಷ ಕೇಬಲ್ ಬ್ರಾಡ್‌ಬ್ಯಾಂಡ್ ಗ್ರಾಹಕರನ್ನು ಹೊಂದಿತ್ತು. ಈ ಸಂಖ್ಯೆಯು 2021ರ ನವೆಂಬರ್‌ ವೇಳೆಗೆ ಅರ್ಧದಷ್ಟಕ್ಕೆ ಕುಸಿತ ಕಂಡಿದೆ.

ಇದೇ ಅವಧಿಯಲ್ಲಿ ಭಾರ್ತಿ ಏರ್‌ಟೆಲ್‌ ಗ್ರಾಹಕರ ಪ್ರಮಾಣವು ಶೇಕಡ 70ರಷ್ಟು ಏರಿಕೆ ಕಂಡಿದೆ. ಇದೇ ಪ್ರಮಾಣದಲ್ಲಿ ಭಾರ್ತಿ ಏರ್‌ಟೆಲ್‌ ಗ್ರಾಹಕರನ್ನು ಪಡೆಯುತ್ತ ಸಾಗಿದಲ್ಲಿ, ಅದು ಬಿಎಸ್‌ಎನ್‌ಎಲ್ ಕಂಪನಿಯನ್ನು ಶೀಘ್ರದಲ್ಲಿಯೇ ಹಿಂದಿಕ್ಕಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.