ಮುಂಬೈ: ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಅಮೆರಿಕ ಮೂಲದ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ ₹11,367 ಕೋಟಿ ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಜಿಯೊ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಘೋಷಿಸಿವೆ.
ಈ ಹೂಡಿಕೆಯು ಜಿಯೊ ಪ್ಲಾಟ್‌ಫಾರ್ಮ್ಸ್‌ನ ಷೇರು ಮೌಲ್ಯ ₹4.91 ಲಕ್ಷ ಕೋಟಿ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು₹5.16 ಲಕ್ಷ ಕೋಟಿಗೆ ಕೊಂಡೊಯ್ಯಲಿದೆ. ವಿಸ್ಟಾ ಹೂಡಿಕೆಯು ಜಿಯೊ ಪ್ಲಾಟ್‌ಫಾರ್ಮ್ಸ್‌ನ ಶೇ 2.32 ಷೇರು ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಮೂಲಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಫೇಸ್‌ಬುಕ್ ನಂತರದ ಅತಿದೊಡ್ಡ ಹೂಡಿಕೆದಾರ ಸ್ಥಾನವನ್ನು ವಿಸ್ಟಾ ಪಡೆದುಕೊಂಡಿದೆ. ಈ ಹೂಡಿಕೆಯೊಂದಿಗೆ, ಮೂರು ವಾರಕ್ಕೂ ಕಡಿಮೆ ಅವಧಿಯಲ್ಲಿ ಜಿಯೊ ಪ್ಲಾಟ್‌ಫಾರ್ಮ್ಸ್ ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ₹60,596.37 ಕೋಟಿ ಹೂಡಿಕೆ ಪಡೆದುಕೊಂಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೊ ಪ್ಲಾಟ್‌ಫಾರ್ಮ್ಸ್, ಜಿಯೊದ ಡಿಜಿಟಲ್ ಆ್ಯಪ್‌ಗಳು, ಡಿಜಿಟಲ್ ಇಕೋಸಿಸ್ಟಂ ಹಾಗೂ ಭಾರತದ ನಂ.1 ಅತಿವೇಗದ ಸಂಪರ್ಕ ವೇದಿಕೆಯನ್ನು ಒಂದೇ ವ್ಯವಸ್ಥೆಯಡಿ ತರುವ ಮೂಲಕ ಭಾರತಕ್ಕಾಗಿ ಡಿಜಿಟಲ್ ಸಮಾಜವನ್ನು ರೂಪಿಸುತ್ತಿರುವ ತಂತ್ರಜ್ಞಾನ ಸಂಸ್ಥೆಯಾಗಿದೆ. 38.80 ಕೋಟಿಗೂ ಹೆಚ್ಚಿನ ಚಂದಾದಾರರಿಗೆ ಸಂಪರ್ಕ ವೇದಿಕೆಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್, ಜಿಯೊ ಪ್ಲಾಟ್‌ಫಾರ್ಮ್ಸ್‌ನ ಅಂಗಸಂಸ್ಥೆಯಾಗಿರಲಿದೆ.
130 ಕೋಟಿ ಭಾರತೀಯರು ಹಾಗೂ ಭಾರತೀಯ ಉದ್ಯಮಗಳಿಗೆ, ಅದರಲ್ಲೂ ವಿಶೇಷವಾಗಿ ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರಿಗೆ, ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೊ ಯೋಜನೆಯಾಗಿದೆ. ಭಾರತೀಯ ಡಿಜಿಟಲ್ ಸೇವೆಗಳ ಕ್ಷೇತ್ರವನ್ನು ಪರಿವರ್ತಿಸುವ ಬದಲಾವಣೆಗಳನ್ನು ಜಿಯೊ ತಂದಿದೆ.
ವಿಸ್ಟಾ ಒಂದು ಪ್ರಮುಖ ಜಾಗತಿಕ ಹೂಡಿಕೆ ಸಂಸ್ಥೆಯಾಗಿದ್ದು, ಉದ್ಯಮಗಳ ವೇಗವರ್ಧಿಸುತ್ತಿರುವ ಎಂಟರ್‌ಪ್ರೈಸ್ ತಂತ್ರಾಂಶ, ಡೇಟಾ ಮತ್ತು ತಂತ್ರಜ್ಞಾನ ಸಶಕ್ತ ಸಂಸ್ಥೆಗಳ ಸಬಲೀಕರಣ ಹಾಗೂ ಬೆಳವಣಿಗೆಯತ್ತ ಗಮನ ಕೇಂದ್ರೀಕರಿಸಿದೆ. ವಿಸ್ಟಾ 57 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚಿನ ಸಂಚಿತ ಬಂಡವಾಳ ಬದ್ಧತೆಗಳನ್ನು ಹೊಂದಿದೆ. ಎಂಟರ್‌ಪ್ರೈಸ್ ತಂತ್ರಾಂಶವೊಂದರಲ್ಲೇ 20 ವರ್ಷಗಳ ಹೂಡಿಕೆ ಅನುಭವವನ್ನು ವಿಸ್ಟಾ ಹೊಂದಿದೆ. ವಿಸ್ಟಾ ಪೋರ್ಟ್‌ಫೋಲಿಯೋ ಸಂಸ್ಥೆಗಳು ಭಾರತದಲ್ಲಿ 13,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿವೆ.
ವಿಸ್ಟಾದ ಈ ಹೂಡಿಕೆಯು, ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳನ್ನು ಒಳಗೊಂಡಂತೆ ಜಿಯೊ ರೂಪಿಸಿರುವ ವಿಶ್ವದರ್ಜೆಯ ಡಿಜಿಟಲ್ ವೇದಿಕೆಯ ಸಾಮರ್ಥ್ಯಕ್ಕೆ ಇನ್ನಷ್ಟು ಪುಷ್ಠಿ ಸಿಗಲಿದೆ.
ವಿಸ್ಟಾ ಜೊತೆಗಿನ ವಹಿವಾಟಿನ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ, 'ವಿಶ್ವದ ಮುಂಚೂಣಿ ಟೆಕ್ ಹೂಡಿಕೆದಾರ ಸಂಸ್ಥೆ ವಿಸ್ಟಾವನ್ನು ಜಾಗತಿಕವಾಗಿ ಮೌಲ್ಯಯುತ ಪಾಲುದಾರರಾಗಿ ಸ್ವಾಗತಿಸಲು ನನಗೆ ಸಂತೋಷವಾಗಿದೆ. ನಮ್ಮ ಇತರ ಪಾಲುದಾರರಂತೆ, ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ಡಿಜಿಟಲ್ ಇಕೋಸಿಸ್ಟಂ ಅನ್ನು ಬೆಳೆಸುವ ಹಾಗೂ ಪರಿವರ್ತಿಸುವುದನ್ನು ಮುಂದುವರೆಸುವುದರಲ್ಲು ವಿಸ್ಟಾ ಕೂಡ ನಮ್ಮೊಂದಿಗೆ ಸೇರಲಿದೆ. ಜಾಗತಿಕವಾಗಿ ತನ್ನ ಹೂಡಿಕೆಗಳಿಗೆ ವಿಸ್ಟಾ ನೀಡುತ್ತಿರುವ ವೃತ್ತಿಪರ ಪರಿಣತಿ ಮತ್ತು ಹಲವು ಹಂತಗಳ ಬೆಂಬಲದ ಪ್ರಯೋಜನವನ್ನು ಜಿಯೊಗಾಗಿಯೂ ಪಡೆಯಲು ನಾವು ಉತ್ಸುಕರಾಗಿದ್ದೇವೆ' ಎಂದು ಹೇಳಿದ್ದಾರೆ.
ಹೂಡಿಕೆಯ ಬಗ್ಗೆ ಮಾತನಾಡಿದ ವಿಸ್ಟಾದ ಸಂಸ್ಥಾಪಕ, ಅಧ್ಯಕ್ಷ ಮತ್ತು ಸಿಇಓ ರಾಬರ್ಟ್ ಎಫ್. ಸ್ಮಿತ್, 'ಭಾರತಕ್ಕಾಗಿ ಜಿಯೊ ನಿರ್ಮಿಸುತ್ತಿರುವ ಡಿಜಿಟಲ್ ಸಮಾಜದ ಸಾಧ್ಯತೆಗಳಲ್ಲಿ ನಾವು ಭರವಸೆ ಹೊಂದಿದ್ದೇವೆ. ಜಿಯೊ ಪ್ರಾರಂಭಿಸಿದ ಡೇಟಾ ಕ್ರಾಂತಿಯನ್ನು ಬೆಳೆಸಲು ಮತ್ತು ಮುನ್ನಡೆಸಲು ಒಂದು ವೇದಿಕೆಯನ್ನು ನಿರ್ಮಿಸಿದೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯ ಭವಿಷ್ಯವನ್ನು ಉತ್ತೇಜಿಸುವುದಕ್ಕಾಗಿ ಆಧುನಿಕ ಗ್ರಾಹಕ, ಸಣ್ಣ ವ್ಯಾಪಾರ ಮತ್ತು ಉದ್ಯಮಗಳಿಗೆ ತಂತ್ರಾಂಶವನ್ನು ಒದಗಿಸಲು ಜಿಯೊ ಪ್ಲಾಟ್‌ಫಾರ್ಮ್ಸ್ ಜೊತೆ ಸೇರಲು ನಾವು ಪುಳಕಿತರಾಗಿದ್ದೇವೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.