ನವದೆಹಲಿ: 2024–25ರ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ₹16,563 ಕೋಟಿ ನಿವ್ವಳ ಲಾಭ ಗಳಿಸಿದೆ.
2023–24ರ ಹಣಕಾಸು ವರ್ಷ ಇದೇ ಅವಧಿಯಲ್ಲಿ ₹17,394 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 5ರಷ್ಟು ಇಳಿಕೆಯಾಗಿದೆ. ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ವ್ಯಾಪಾರದಲ್ಲಿನ ಇಳಿಕೆಯಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದು ಕಂಪನಿ ಷೇರುಪೇಟೆಗೆ ಸೋಮವಾರ ತಿಳಿಸಿದೆ.
ಒಟ್ಟು ವರಮಾನವು ₹2.4 ಲಕ್ಷ ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹2.38 ಲಕ್ಷ ಕೋಟಿಯಷ್ಟಿತ್ತು.
ಜಿಯೊ ಪ್ಲಾಟ್‌ಫಾರ್ಮ್ಸ್ ಲಾಭ ಜಿಗಿತ:
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಅಂಗಸಂಸ್ಥೆಯಾಗಿರುವ ಜಿಯೊ ಪ್ಲಾಟ್‌ಫಾರ್ಮ್ಸ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿನ ಲಾಭವು ಶೇ 23ರಷ್ಟು ಏರಿಕೆಯಾಗಿದ್ದು, ₹6,539 ಕೋಟಿ ಲಾಭ ಗಳಿಸಿದೆ.
ವರಮಾನವು ₹31,709 ಕೋಟಿಯಾಗಿದ್ದು, ಶೇ 18ರಷ್ಟು ಏರಿಕೆಯಾಗಿದೆ. ಪ್ರತಿ ಬಳಕೆದಾರನಿಂದ ಪಡೆಯುವ ಸರಾಸರಿ ಮಾಸಿಕ ಆದಾಯವು (ಎಆರ್‌ಪಿಯು) ₹195.1 ಆಗಿದೆ. ಜಿಯೊ 5ಜಿ ಬಳಕೆದಾರರ ಸಂಖ್ಯೆ 14.8 ಕೋಟಿಗೆ ಹೆಚ್ಚಳವಾಗಿದೆ.
ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್‌ಆರ್‌ವಿಎಲ್) ವರಮಾನವು ಶೇ 3ರಷ್ಟು ಇಳಿಕೆಯಾಗಿದ್ದು, ₹66,502 ಕೋಟಿಯಾಗಿದೆ. ತೆರಿಗೆ ನಂತರದ ಲಾಭ ಶೇ 1ರಷ್ಟು ಹೆಚ್ಚಳವಾಗಿದ್ದು, ₹2,836 ಕೋಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.