ಮುಂಬೈ: ದೇಶಿ ಆರ್ಥಿಕತೆಯಲ್ಲಿ ಖರೀದಿ ಉತ್ಸಾಹ ಬಡಿದೆಬ್ಬಿಸಲು ಭಾರತೀಯ ರಿಸರ್ವ್ ಬ್ಯಾಂಕ್, ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಸತತ ಐದನೇ ಬಾರಿಗೆ ಕಡಿತಗೊಳಿಸಿದೆ.
ಶುಕ್ರವಾರ ಪ್ರಕಟಿಸಿದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರವನ್ನು ಶೇ 0.25ರಷ್ಟು ಕಡಿತಗೊಳಿಸಲಾಗಿದೆ. ಶೇ 5.15ರಷ್ಟು ದರವು 10 ವರ್ಷಗಳಲ್ಲಿನ ಕಡಿಮೆ ಮಟ್ಟವಾಗಿದೆ. ರೆಪೊ ದರ ಆಧರಿಸಿರುವ ಗೃಹ, ವಾಹನ ಖರೀದಿ, ವೈಯಕ್ತಿಕ ಮತ್ತಿತರ ಸಾಲಗಳ ಬಡ್ಡಿ ದರಗಳು ಇನ್ನು ಮುಂದೆ ಇನ್ನಷ್ಟು ಅಗ್ಗವಾಗಲಿವೆ.
ಬಡ್ಡಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ವಾಣಿಜ್ಯ ಬ್ಯಾಂಕ್‌ಗಳು ತ್ವರಿತವಾಗಿ ಕಾರ್ಯೋನ್ಮುಖವಾಗಬೇಕಾಗಿದೆ.
ಪರಿಷ್ಕೃತ ವೃದ್ಧಿ ದರ: ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರದ ಮುನ್ನೋಟವನ್ನು ಆರ್‌ಬಿಐ ಶೇ 6.9 ರಿಂದ ಶೇ 6.1ಕ್ಕೆ ಪರಿಷ್ಕರಿಸಿದೆ. ಇದು ಷೇರುಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಸಂವೇದಿ ಸೂಚ್ಯಂಕವು 434 ಅಂಶಗಳಷ್ಟು ಭಾರಿ ಕುಸಿತ ಕಂಡಿತು.
ಸದೃಢ ಬ್ಯಾಂಕಿಂಗ್ ವ್ಯವಸ್ಥೆ: ‘ದೇಶಿ ಬ್ಯಾಂಕಿಂಗ್ ಕ್ಷೇತ್ರವು ಸದೃಢವಾಗಿದೆ. ಆತಂಕ ಪಡುವುದಕ್ಕೆ ಯಾವುದೇ ಕಾರಣಗಳಿಲ್ಲ. ಕೆಲವೊಮ್ಮೆ ಗಾಳಿ ಸುದ್ದಿಗಳು ಗ್ರಾಹಕರಲ್ಲಿ ಆತಂಕ ಮೂಡಿಸುತ್ತವೆ. ಜನರು ಅವುಗಳಿಗೆ ಕಿವಿಗೊಡಬಾರದು’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.