ನವದೆಹಲಿ: ‘ರೆಸ್ಟೋರೆಂಟ್‌ಗಳು ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಸೇರಿಸುವಂತಿಲ್ಲ. ಸೇವೆಯು ಇಷ್ಟವಾದಲ್ಲಿ ಗ್ರಾಹಕರು ಪ್ರತ್ಯೇಕವಾಗಿ ಟಿಪ್ಸ್ ನೀಡಬಹುದು’ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪೀಯೂಷ್ ಗೋಯಲ್ ಶುಕ್ರವಾರ ಹೇಳಿದ್ದಾರೆ.
ಸೇವಾ ಶುಲ್ಕ ಪಡೆಯದೇ ಇದ್ದರೆ ನಷ್ಟವಾಗುತ್ತದೆ ಎನ್ನುವ ರೆಸ್ಟೋರೆಂಟ್ ಮಾಲೀಕರ ವಾದವನ್ನು ಅವರು ತಳ್ಳಿಹಾಕಿದ್ದಾರೆ.
‘ರೆಸ್ಟೋರೆಂಟ್ ಮಾಲೀಕರು ಕೆಲಸಗಾರರಿಗೆ ಹೆಚ್ಚಿನ ವೇತನ ಕೊಡಬೇಕು ಎಂದಾದಲ್ಲಿ ಆಹಾರ ಉತ್ಪನ್ನಗಳ ದರ ಹೆಚ್ಚಿಸಲು ಅವರು ಸ್ವತಂತ್ರರಾಗಿದ್ದಾರೆ. ದೇಶದಲ್ಲಿ ಆಹಾರ ಉತ್ಪನ್ನಗಳ ದರ ಮೇಲೆ ಯಾವುದೇ ನಿಯಂತ್ರಣ ಇಲ್ಲ’ ಎಂದು ಅವರು ತಿಳಿಸಿದ್ದಾರೆ.
ಸೇವಾ ಶುಲ್ಕ ವಿಧಿಸುತ್ತಿರುವ ಬಗ್ಗೆ ಗ್ರಾಹಕರಿಂದ ದೂರುಗಳು ಬರುತ್ತಿವೆ ಎಂದು ಹೇಳಿರುವ ಅವರು. ‘ಕೆಲಸಗಾರರಿಗೆ ಹೆಚ್ಚಿನ ವೇತನ ನೀಡಲು ಮತ್ತು ಆಹಾರ ಉತ್ಪನ್ನಗಳ ದರ ಹೆಚ್ಚಿಸಲು ನೀವು ಸ್ವತಂತ್ರರು. ಆದರೆ, ಬಿಲ್‌ನಲ್ಲಿ ಮರೆಮಾಚಿದ ವೆಚ್ಚ ಇದ್ದರೆ ಜನರಿಗೆ ನಿಜವಾದ ಬೆಲೆ ಹೇಗೆ ಗೊತ್ತಾಗುತ್ತದೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದನ್ನು ತಡೆಯಲು ಸರ್ಕಾರ ಶೀಘ್ರದಲ್ಲೇ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಿದೆ’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.