ADVERTISEMENT

ಎರಡು ವರ್ಷಗಳ ಕನಿಷ್ಠ ಮಟ್ಟಕ್ಕೆ ಹಣದುಬ್ಬರ

ಪಿಟಿಐ
Published 12 ಜೂನ್ 2023, 15:42 IST
Last Updated 12 ಜೂನ್ 2023, 15:42 IST
ಆರ್‌ಬಿಐ
ಆರ್‌ಬಿಐ   

ನವದೆಹಲಿ: ಚಿಲ್ಲರೆ ಹಣದುಬ್ಬರ ಪ್ರಮಾಣವು ಮೇ ತಿಂಗಳಲ್ಲಿ ಎರಡು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 4.25ಕ್ಕೆ ಇಳಿಕೆ ಕಂಡಿದೆ. ಆಹಾರ ಮತ್ತು ಇಂಧನ ಉತ್ಪನ್ನಗಳ ಬೆಲೆ ಏರಿಕೆಯು ತಗ್ಗಿದ್ದು ಇದಕ್ಕೆ ಒಂದು ಕಾರಣ.

ಹಣದುಬ್ಬರ ಪ್ರಮಾಣವು ಕಡಿಮೆ ಆಗಿರುವುದರಿಂದಾಗಿ, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ ರೆಪೊ ದರವನ್ನು ಸ್ಥಿರವಾಗಿ ಇರಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಮೇ ತಿಂಗಳ ಹಣದುಬ್ಬರ ಪ್ರಮಾಣವು 2021ರ ಏಪ್ರಿಲ್‌ ನಂತರದ ಅತಿ ಕಡಿಮೆ ಪ್ರಮಾಣ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಸತತ ನಾಲ್ಕು ತಿಂಗಳುಗಳಿಂದ ಕಡಿಮೆ ಆಗುತ್ತಿದೆ. ಅಲ್ಲದೆ, ಸತತ ಮೂರು ತಿಂಗಳುಗಳಿಂದ ಅದು ಆರ್‌ಬಿಐ ನಿಗದಿ ಮಾಡಿಕೊಂಡಿರುವ ಗರಿಷ್ಠ ಮಿತಿಯಾಗಿರುವ ಶೇ 6ಕ್ಕಿಂತ ಕಡಿಮೆ ಇದೆ.

ADVERTISEMENT

ಮೇ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಕಡಿಮೆ ಆಗಿದ್ದರೂ, ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆ ಆದರೆ, ಅದರ ಪರಿಣಾಮವು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯ ರೂಪದಲ್ಲಿ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆರ್‌ಬಿಐ ರೆಪೊ ದರವನ್ನು ಪ್ರಸಕ್ತ ಆರ್ಥಿಕ ವರ್ಷದುದ್ದಕ್ಕೂ ಈಗಿನ ಮಟ್ಟದಲ್ಲಿಯೇ ಉಳಿಸಿಕೊಳ್ಳಬಹುದು ಎಂದು ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಯ್ಯರ್ ಅಂದಾಜಿಸಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಮುಂದಿನ ತಿಂಗಳುಗಳಲ್ಲಿ ಹಣದುಬ್ಬರದ ಪ್ರಮಾಣವು ಶೇ 4.4ರಿಂದ ಶೇ 5.4ರ ನಡುವೆ ಉಳಿಯಬಹುದು ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆಯ ತಜ್ಞರು ಅಂದಾಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.