ನವದೆಹಲಿ (ಪಿಟಿಐ): ದೇಶದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟವಾದ ಶೇ 5.02ಕ್ಕೆ ಇಳಿಕೆ ಕಂಡಿದೆ. ತರಕಾರಿಗಳು, ಆಹಾರ ವಸ್ತುಗಳ ಬೆಲೆ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ.
ಚಿಲ್ಲರೆ ಹಣದುಬ್ಬರವು ಎರಡು ತಿಂಗಳ ಬಳಿಕ ಆರ್‌ಬಿಐ ಹಾಕಿಕೊಂಡಿರುವ ಗರಿಷ್ಠ ಮಿತಿಯಾದ ಶೇ 6ಕ್ಕಿಂತಲೂ ಕೆಳಕ್ಕೆ ಬಂದಿದೆ. ಗ್ರಾಹಕರ ದರ ಸೂಚ್ಯಂಕ ಆಧರಿಸಿದ ಹಣದುಬ್ಬರವು ಜುಲೈನಲ್ಲಿ ಶೇ 7.41 ಮತ್ತು ಆಗಸ್ಟ್‌ನಲ್ಲಿ ಶೇ 6.83ರಷ್ಟು ಗರಿಷ್ಠ ಮಟ್ಟದಲ್ಲಿ ಇತ್ತು.
ಇದೇ ವರ್ಷದ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 4.87ರಷ್ಟು ಕನಿಷ್ಠ ಮಟ್ಟದಲ್ಲಿ ದಾಖಲಾಗಿತ್ತು.
ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಆಹಾರ ಹಣದುಬ್ಬರವು ಶೇ 9.94 ರಿಂದ ಶೇ 6.56ಕ್ಕೆ ಇಳಿಕೆ ಕಂಡಿದೆ. ತರಕಾರಿಗಳ ಬೆಲೆಯು ಶೇ 26.14ರಿಂದ ಶೇ 3.39ಕ್ಕೆ ಇಳಿಕೆ ಕಂಡಿದೆ.
ಮುಂಗಾರು ಮಳೆಯ ಕೊರತೆ, ಬೇಳೆಕಾಳು ಮತ್ತು ಎಣ್ಣೆಕಾಳುಗಳಂತಹ ಮುಂಗಾರು ಬೆಳೆಗಳ ಬಿತ್ತನೆ ಪ್ರಮಾಣ ಕಡಿಮೆ ಆಗಿರುವುದರ ಜೊತೆಗೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದು ಆಹಾರ ಹಣದುಬ್ಬದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಐಸಿಆರ್‌ಎನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.