ADVERTISEMENT

ಚಿಲ್ಲರೆ ಹಣದುಬ್ಬರ 4 ತಿಂಗಳ ಕನಿಷ್ಠ

ಪಿಟಿಐ
Published 12 ಮಾರ್ಚ್ 2024, 16:08 IST
Last Updated 12 ಮಾರ್ಚ್ 2024, 16:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಫೆಬ್ರುವರಿಯಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ 5.09ಕ್ಕೆ ಇಳಿಕೆಯಾಗಿದೆ.

ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರವು ಜನವರಿಯಲ್ಲಿ ಶೇ 5.1ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಹೆಚ್ಚಿನ ಬದಲಾವಣೆಯಾಗಿಲ್ಲ. ಆದರೆ, ಆಹಾರ ಪದಾರ್ಥಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.

ಜನವರಿಯಲ್ಲಿ ಶೇ 8.3ರಷ್ಟಿದ್ದ ಆಹಾರ ಪದಾರ್ಥಗಳ ದರವು ಫೆಬ್ರುವರಿಯಲ್ಲಿ ಶೇ 8.66ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಂಗಳವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ADVERTISEMENT

ತರಕಾರಿಗಳು, ಹಣ್ಣುಗಳು, ಖಾದ್ಯ ತೈಲ ಮತ್ತು ಕೊಬ್ಬು, ಬೇಳೆಕಾಳು ಧಾರಣೆಯು ಗಣನೀಯವಾಗಿ ತಗ್ಗಿದೆ. ಆದರೆ ಧಾನ್ಯಗಳು, ಮಾಂಸ, ಮೀನು, ಹಾಲು ಹಾಗೂ ಅದರ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ ಎಂದು ಹೇಳಿದೆ. 

ಚಿಲ್ಲರೆ ಹಣದುಬ್ಬರವನ್ನು ನಿರ್ಧರಿಸುವಲ್ಲಿ ಆಹಾರ ಪದಾರ್ಥಗಳ ಪಾಲು ಶೇ 50ರಷ್ಟಿದೆ. 

ದೇಶದ ಗ್ರಾಮೀಣ ಪ್ರದೇಶದಲ್ಲಿ ಸರಾಸರಿ ಚಿಲ್ಲರೆ ಹಣದುಬ್ಬರವು ಶೇ 5.34ರಷ್ಟಿದೆ. ಇದಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಶೇ 4.78ರಷ್ಟು ದಾಖಲಾಗಿದೆ.  

ರಾಜ್ಯವಾರು ಪಟ್ಟಿಯಲ್ಲಿ ಒಡಿಶಾದಲ್ಲಿ ಶೇ 7.55ರಷ್ಟು ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ನವದೆಹಲಿಯಲ್ಲಿ ಶೇ 2.42ರಷ್ಟು ಕಡಿಮೆ ದಾಖಲಾಗಿದೆ. ಕರ್ನಾಟಕದಲ್ಲಿ ಶೇ 5.74ರಷ್ಟು ದಾಖಲಾಗಿದೆ.

ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿಯೇ ಕಾಯ್ದುಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಪ್ರಯತ್ನಿಸುತ್ತಿದೆ. 

2023–24ನೇ ಆರ್ಥಿಕ ವರ್ಷದಲ್ಲಿ ದೇಶದ ಚಿಲ್ಲರೆ ಹಣದುಬ್ಬರವು ಶೇ 5.4ರಷ್ಟು ದಾಖಲಾಗಲಿದೆ. ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ 5ರಷ್ಟು ದಾಖಲಾಗಲಿದೆ ಎಂದು ಆರ್‌ಬಿಐ ಕಳೆದ ತಿಂಗಳು ಅಂದಾಜಿಸಿತ್ತು.

‘ಫೆಬ್ರುವರಿಯಲ್ಲಿ ಆಹಾರ ಪದಾರ್ಥಗಳನ್ನು ಹೊರತುಪಡಿಸಿದರೆ ಇತರೆ ಸರಕುಗಳ ಬೆಲೆ ಇಳಿಕೆಯಾಗಿದೆ. ಆಹಾರೇತರ ಪದಾರ್ಥಗಳ ದರ ಇಳಿಕೆಯಾಗಿರುವುದು ಸಮಾಧಾನ ತಂದಿದೆ’ ಎಂದು ಐಸಿಎಆರ್‌ನ ಮುಖ್ಯ ಆರ್ಥಿಕ ತಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.