ADVERTISEMENT

ಹಣದುಬ್ಬರ ಪ್ರಮಾಣ 8 ವರ್ಷಗಳ ಗರಿಷ್ಠ ಮಟ್ಟಕ್ಕೆ

ಆರ್‌ಬಿಐನಿಂದ ಮತ್ತೆ ರೆಪೊ ದರ ಹೆಚ್ಚಳ ಸಾಧ್ಯತೆ: ಸಾಲ ತುಟ್ಟಿ ಸಂಭವ

​ಪ್ರಜಾವಾಣಿ ವಾರ್ತೆ
Published 13 ಮೇ 2022, 3:55 IST
Last Updated 13 ಮೇ 2022, 3:55 IST
   

ನವದೆಹಲಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಏಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟವಾದ ಶೇಕಡ 7.79ಕ್ಕೆ ತಲುಪಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ದರ ಏರಿಕೆಗೆ ಆಹಾರ ಮತ್ತು ಇಂಧನ ಬೆಲೆ ಹೆಚ್ಚಳ ‍ಪ್ರಮುಖ ಕಾರಣ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿಯ (ಎಂಪಿಸಿ) ಜೂನ್‌ ತಿಂಗಳಲ್ಲಿ ಸಭೆ ಸೇರಲಿದ್ದು, ಹಣದುಬ್ಬರದ ಈ ಏರಿಕೆಯನ್ನು ಗಮನದಲ್ಲಿ ಇರಿಸಿಕೊಂಡು ರೆಪೊ ದರ ಮತ್ತೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆ ರೀತಿ ಆದಲ್ಲಿ, ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಬಡ್ಡಿ ದರ ಮತ್ತೆ ಹೆಚ್ಚಾಗಿ, ವಿವಿಧ ಸಾಲಗಳು ತುಟ್ಟಿಯಾಗಲಿವೆ. ಆರ್‌ಬಿಐ ಈ ತಿಂಗಳ ಆರಂಭದಲ್ಲಿ ರೆಪೊ ದರದವನ್ನು ಶೇ 0.40ರಷ್ಟು ಹೆಚ್ಚಿಸಿದೆ.

ಚಿಲ್ಲರೆ ಹಣದುಬ್ಬರ ದರವು ಈ ವರ್ಷದ ಜನವರಿಯಿಂದಲೂ ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದೆ. ಆರ್‌ಬಿಐ ನಿಗದಿ ಮಾಡಿಕೊಂಡಿರುವ ಗುರಿಯ ಅನ್ವಯ, ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ರೊಳಗೆ ಇರಬೇಕು.

ADVERTISEMENT

2014ರ ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 8.33ರಷ್ಟು ಇತ್ತು. ಅದಾದ ನಂತರದ ಗರಿಷ್ಠ ಮಟ್ಟ ಈ ವರ್ಷದ ಏಪ್ರಿಲ್‌ನಲ್ಲಿ ದಾಖಲಾಗಿದೆ. ಮಾರ್ಚ್‌ ತಿಂಗಳಲ್ಲಿ ಇದು ಶೇ 6.95ರಷ್ಟು ಇತ್ತು. ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ಹಣದುಬ್ಬರ ಪ್ರಮಾಣವು ಶೇ 4.23 ಮಾತ್ರ ಆಗಿತ್ತು.

ತಿಂಗಳ ಆರಂಭದಲ್ಲಿ ಅನಿರೀಕ್ಷಿತವಾಗಿ ರೆಪೊ ದರ ಹೆಚ್ಚಿಸುವ ಸಂದರ್ಭದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು, ‘ಜಾಗತಿಕ ಮಟ್ಟದಲ್ಲಿ ಆಹಾರ ವಸ್ತುಗಳ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆ ಆಗಿರುವುದರ ಪರಿಣಾಮಗಳು ದೇಶಿ ಮಾರುಕಟ್ಟೆಯಲ್ಲಿಯೂ ಕಾಣಿಸುತ್ತಿವೆ. ಮುಂದಿನ ದಿನಗಳಲ್ಲಿಯೂ ಹಣದು ಬ್ಬರ ಹೆಚ್ಚಿನ ಪ್ರಮಾಣದಲ್ಲಿ ಇರುವ ಸಾಧ್ಯತೆಗಳಿವೆ’ ಎಂದು ಹೇಳಿದ್ದರು.

‘ಹಣದುಬ್ಬರದ ಏರಿಕೆಯ ಪ್ರಮಾಣವು ಆರ್‌ಬಿಐ ಈಚೆಗೆ ರೆಪೊ ದರ ಹೆಚ್ಚಿಸಿರುವುದು ಸರಿ ಎಂಬುದನ್ನು ತೋರಿಸಿ
ಕೊಟ್ಟಿದೆ. ಜೂನ್‌ನಲ್ಲಿಯೂ ರೆಪೊ ದರ ಮತ್ತೆ ಜಾಸ್ತಿಯಾಗುವ ಸಾಧ್ಯತೆಯನ್ನು ಹೆಚ್ಚು ಮಾಡಿದೆ. ಮೇ ತಿಂಗಳಲ್ಲಿ ಹಣ
ದುಬ್ಬರ ಪ್ರಮಾಣವು ತುಸು ತಗ್ಗಿದರೂ ಅದು ಶೇ 6.5ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇರಲಿದೆ’ ಎಂದು ರೇಟಿಂಗ್ಸ್ ಸಂಸ್ಥೆ ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ರೂಪಾಯಿ ಮೌಲ್ಯ @ 77.50
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77.50ಕ್ಕೆ ಗುರುವಾರ ಕುಸಿದಿದೆ.

ಗುರುವಾರದ ವಹಿವಾಟಿನ ಒಂದು ಹಂತದಲ್ಲಿ ರೂಪಾಯಿ ಮೌಲ್ಯವು 77.63ಕ್ಕೆ ಇಳಿಕೆಯಾಗಿತ್ತು. ನಂತರ ತುಸು ಚೇತರಿಸಿಕೊಂಡಿತು. ಡಾಲರ್‌ ಮೌಲ್ಯವು ಎರಡು ದಶಕಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ.

ಅಮೆರಿಕದಲ್ಲಿ ಹಣದುಬ್ಬರ ಜಾಸ್ತಿಯಾಗಿರುವ ಕಾರಣ ಅಲ್ಲಿ ಮತ್ತೆ ಬಡ್ಡಿ ದರ ಏರಿಕೆಯಾಗುವ ಸಾಧ್ಯತೆ, ಅರ್ಥ ವ್ಯವಸ್ಥೆಯ ಬೆಳವಣಿಗೆಯು ಮಂದಗತಿಯಲ್ಲಿ ಇರಬಹುದು ಎಂಬ ಅಂದಾಜು ಹಾಗೂ ವಿದೇಶಿ ಬಂಡವಾಳವು ದೇಶದಿಂದ ಹೊರಹೋಗುತ್ತ ಇರುವುದು ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.