ADVERTISEMENT

ಹಣದುಬ್ಬರ: ಸತತ ಎರಡನೇ ತಿಂಗಳು ಇಳಿಕೆ

ರೆಪೊ ದರ ಕಡಿತ: ಸಾಲಗಾರರಲ್ಲಿ ಗರಿಗೆದರಿದ ನಿರೀಕ್ಷೆ

ಪಿಟಿಐ
Published 12 ಸೆಪ್ಟೆಂಬರ್ 2024, 16:03 IST
Last Updated 12 ಸೆಪ್ಟೆಂಬರ್ 2024, 16:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ ತಿಂಗಳಿನಲ್ಲಿ ಶೇ 3.65ರಷ್ಟು ದಾಖಲಾಗಿದೆ. 

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗುರಿಯಾಗಿದೆ. ಸತತ ಎರಡನೇ ತಿಂಗಳಿನಲ್ಲಿ ಈ ಮಿತಿಯಲ್ಲಿಯೇ ದಾಖಲಾಗಿದೆ. ಹಾಗಾಗಿ, ಆರ್‌ಬಿಐ ರೆಪೊ ದರ ಕಡಿತಗೊಳಿಸಲಿದೆ ಎಂಬ ನಿರೀಕ್ಷೆ ಗೃಹ ಹಾಗೂ ವಾಹನ ಸಾಲಗಾರರಲ್ಲಿ ಗರಿಗೆದರಿದೆ. 

ಜುಲೈ ತಿಂಗಳಿನಲ್ಲಿ ಐದು ವರ್ಷದ ಕನಿಷ್ಠ ಮಟ್ಟವಾದ ಶೇ 3.6ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.  ತರಕಾರಿ ಮತ್ತು ಬೇಳೆಕಾಳು ಬೆಲೆ ಏರಿಕೆಯೇ ಇದಕ್ಕೆ ಕಾರಣವಾಗಿದೆ.

ADVERTISEMENT

ಕಳೆದ ವರ್ಷದ ಆಗಸ್ಟ್‌ನಲ್ಲಿ ಶೇ 6.83ರಷ್ಟು ದಾಖಲಾಗಿತ್ತು. 

‘ಕಳೆದ ಐದು ವರ್ಷದಲ್ಲಿ ಸತತ ಎರಡನೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಕನಿಷ್ಠ ಮಟ್ಟದಲ್ಲಿ ದಾಖಲಾಗಿದೆ’ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯಿಂದ (ಎನ್‌ಎಸ್‌ಒ) ಗುರುವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಆದರೆ, ಹಣದುಬ್ಬರ ಇಳಿಕೆಯಾದರೂ ಗ್ರಾಹಕರಿಗೆ ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯ ಬಿಸಿ ಕಡಿಮೆಯಾಗಿಲ್ಲ. ತರಕಾರಿ ಬೆಲೆಯಲ್ಲಿ ಶೇ 10.71ರಷ್ಟು ಹಾಗೂ ಬೇಳೆಕಾಳು ದರದಲ್ಲಿ ಶೇ 13.6ರಷ್ಟು ಏರಿಕೆಯಾಗಿದೆ.

ಮಸಾಲೆ (ಶೇ –4.4ರಷ್ಟು), ತೈಲ ಮತ್ತು ಕೊಬ್ಬಿನ ಪದಾರ್ಥಗಳ ಬೆಲೆಯಲ್ಲಿ (ಶೇ –0.86ರಷ್ಟು) ಇಳಿಕೆಯಾಗಿದೆ.

ಜುಲೈನಲ್ಲಿ ಶೇ 5.42ರಷ್ಟಿದ್ದ ಆಹಾರ ಹಣದುಬ್ಬರವು, ಆಗಸ್ಟ್‌ನಲ್ಲಿ ಶೇ 5.66ರಷ್ಟು  ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಟೊಮೆಟೊ ಬೆಲೆಯಲ್ಲಿ ಇಳಿಕೆಯಾಗಿದೆ (ಶೇ –47.91ರಷ್ಟು). ಇಂಧನ ಮತ್ತು ವಿದ್ಯುತ್‌ ವಿಭಾಗದಲ್ಲಿ ಬೆಲೆ ಗಮನಾರ್ಹವಾಗಿ ಕಡಿಮೆಯಾಗಿದೆ (ಶೇ –5.31ರಷ್ಟು).

ಗ್ರಾಮೀಣರಿಗೆ ಬೆಲೆ ಏರಿಕೆ

ಬಿಸಿ ನಗರ ವಾಸಿಗಳಿಗೆ ಹೋಲಿಸಿದರೆ ಗ್ರಾಮೀಣ ಜನರಿಗೆ ಆಹಾರ ಪದಾರ್ಥಗಳ ಬೆಲೆ ಏರಿಕೆಯ ಬಿಸಿ ತಟ್ಟಿದೆ. ನಗರ ಪ್ರದೇಶದಲ್ಲಿ ಹಣದುಬ್ಬರವು ಶೇ 3.14ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 4.16ರಷ್ಟು ದಾಖಲಾಗಿದೆ. ಬಿಹಾರದಲ್ಲಿ ಅತಿಹೆಚ್ಚು (ಶೇ 6.62ರಷ್ಟು) ಹಣದುಬ್ಬರ ದಾಖಲಾಗಿದ್ದರೆ ತೆಲಂಗಾಣದಲ್ಲಿ ಅತಿ ಕಡಿಮೆ ದಾಖಲಾಗಿದೆ (ಶೇ 2.02ರಷ್ಟು).  ‘ಆಗಸ್ಟ್‌ನಲ್ಲಿ ಸರಕುಗಳ ಬೆಲೆ ಕಡಿಮೆಯಾದರೂ ಸೇವಾ ವಲಯದಲ್ಲಿ ಬೇಡಿಕೆ ಹೆಚ್ಚಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹತ್ತಿ ಬಿತ್ತನೆ ಕಡಿಮೆಯಾಗಿದೆ. ಹಾಗಾಗಿ ಚಿಲ್ಲರೆ ಹಣದುಬ್ಬರವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆಯೆಂದು ನಿರೀಕ್ಷಿಸಲಾಗಿತ್ತು’ ಎಂದು ಐಸಿಆರ್‌ಎ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.