ADVERTISEMENT

ಚಿಲ್ಲರೆ ಹಣದುಬ್ಬರ: 4 ತಿಂಗಳ ಗರಿಷ್ಠ ಮಟ್ಟಕ್ಕೆ

ಆಹಾರ ಪದಾರ್ಥಗಳ ಬೆಲೆ ಹೆಚ್ಚಳವೇ ಏರಿಕೆಗೆ ಕಾರಣ: ಎನ್‌ಎಸ್‌ಒ

ಪಿಟಿಐ
Published 12 ಜುಲೈ 2024, 15:08 IST
Last Updated 12 ಜುಲೈ 2024, 15:08 IST
<div class="paragraphs"><p>ಚಿಲ್ಲರೆ ಹಣದುಬ್ಬರ</p></div>

ಚಿಲ್ಲರೆ ಹಣದುಬ್ಬರ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು ಜೂನ್‌ ತಿಂಗಳಲ್ಲಿ ಶೇ 5.08ರಷ್ಟಕ್ಕೆ ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.

ADVERTISEMENT

ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದೇ ಏರಿಕೆಗೆ ಕಾರಣವಾಗಿದೆ ಎಂದು ಶುಕ್ರವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ತಿಳಿಸಿದೆ. 

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು 2024ರ ಮೇ ತಿಂಗಳಲ್ಲಿ ಶೇ 4.8ರಷ್ಟು ದಾಖಲಾಗಿತ್ತು. ಇದು 2023ರ ಜೂನ್‌ನಲ್ಲಿ ಶೇ 4.87ರಷ್ಟಿತ್ತು ಎಂದು ವರದಿ ತಿಳಿಸಿದೆ.

ಮೇ ತಿಂಗಳಲ್ಲಿ ಆಹಾರ ಪದಾರ್ಥಗಳ ಬೆಲೆಯು ಶೇ 8.69ರಷ್ಟು ದಾಖಲಾಗಿತ್ತು. ಅದು ಜೂನ್‌ ತಿಂಗಳಲ್ಲಿ ಶೇ 9.36ಕ್ಕೆ ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವುದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗುರಿಯಾಗಿದೆ. 2024–25ರ ಪೂರ್ಣ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.5ರಷ್ಟು ಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ 4.9, ಎರಡನೇ ತ್ರೈಮಾಸಿಕದಲ್ಲಿ ಶೇ 3.8, ಮೂರನೇ ತ್ರೈಮಾಸಿಕದಲ್ಲಿ ಶೇ 4.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ 4.5ರಷ್ಟು ದಾಖಲಾಗಲಿದೆ ಎಂದು ಆರ್‌ಬಿಐ ಅಂದಾಜಿಸಿದೆ.

ಕೈಗಾರಿಕಾ ಉತ್ಪಾದನೆ ಏಳು ತಿಂಗಳ ಗರಿಷ್ಠ:

ದೇಶದ ಕೈಗಾರಿಕಾ ಉತ್ಪಾದನೆ ಬೆಳವಣಿಗೆ ಮೇ ತಿಂಗಳಲ್ಲಿ ಏಳು ತಿಂಗಳ ಗರಿಷ್ಠ ಶೇ 5.9ರಷ್ಟು ದಾಖಲಾಗಿದೆ. 

ಗಣಿಗಾರಿಕೆ ಮತ್ತು ವಿದ್ಯುತ್‌ ವಲಯದ ಬೆಳವಣಿಗೆಯು ಉತ್ತಮವಾಗಿದೆ ಎಂದು ಶುಕ್ರವಾರ ಬಿಡುಗಡೆಯಾಗಿರುವ ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ವರದಿ ತಿಳಿಸಿದೆ.

ಕೈಗಾರಿಕಾ ಉತ್ಪಾದನೆ ಸೂಚ್ಯಂಕ (ಐಐಪಿ) ಆಧಾರದ ಮೇಲೆ ಲೆಕ್ಕ ಹಾಕುವ ಈ ಬೆಳವಣಿಗೆಯು ಜನವರಿಯಲ್ಲಿ ಶೇ 4.2, ಫೆಬ್ರುವರಿಯಲ್ಲಿ ಶೇ 5.6, ಮಾರ್ಚ್‌ನಲ್ಲಿ ಶೇ 5.4 ಮತ್ತು ಏಪ್ರಿಲ್‌ನಲ್ಲಿ ಶೇ 5ರಷ್ಟು ದಾಖಲಾಗಿತ್ತು.

2023ರ ಮೇ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಬೆಳವಣಿಗೆ ಶೇ 5.7 ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.