ನವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಿನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 6.21ರಷ್ಟು ದಾಖಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವ ಗುರಿ ಹೊಂದಿದೆ. ಆದರೆ, ಆಹಾರ ಪದಾರ್ಥಗಳ ದರ ಹೆಚ್ಚಳದಿಂದಾಗಿ ಹಣದುಬ್ಬರವು ಆರ್‌ಬಿಐನ ಈ ತಾಳಿಕೆಯ ಮಟ್ಟವನ್ನು ಮೀರಿದೆ ಎಂದು ಮಂಗಳವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ಹೇಳಿದೆ.
ಗ್ರಾಮೀಣರಿಗೆ ಬೆಲೆ ಏರಿಕೆಯ ಬಿಸಿ ಹೆಚ್ಚು ತಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಚಿಲ್ಲರೆ ಹಣದುಬ್ಬರವು
ಶೇ 6.68ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ 5.62ರಷ್ಟು ದಾಖಲಾಗಿದೆ.
ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಶೇ 5.49ರಷ್ಟು ದಾಖಲಾಗಿತ್ತು. ಕಳೆದ ವರ್ಷದ
ಅಕ್ಟೋಬರ್‌ನಲ್ಲಿ ಶೇ 4.87ರಷ್ಟು ದಾಖಲಾಗಿತ್ತು.
ರೆಪೊ ದರ ಇಳಿಸುವಲ್ಲಿ ಚಿಲ್ಲರೆ ಹಣದುಬ್ಬರದ ಪಾತ್ರ ನಿರ್ಣಾಯಕವಾಗಿದೆ ಎಂದು ಹಣಕಾಸು ತಜ್ಞರು ಹೇಳಿದ್ದಾರೆ.
ತರಕಾರಿ, ಹಣ್ಣು ದರ ಏರಿಕೆ
‘ಸೆಪ್ಟೆಂಬರ್‌ನಲ್ಲಿ ಶೇ 9.24ರಷ್ಟಿದ್ದ ಆಹಾರ ಹಣದುಬ್ಬರವು, ಅಕ್ಟೋಬರ್‌ನಲ್ಲಿ
ಶೇ 10.87ರಷ್ಟು ಏರಿಕೆಯಾಗಿದೆ.
ಬೇಳೆಕಾಳುಗಳು, ಮೊಟ್ಟೆ, ಸಕ್ಕರೆ ಮತ್ತು ಸಂಬಾರ ಪದಾರ್ಥಗಳ ದರವು ಗಣನೀಯವಾಗಿ ಇಳಿಕೆಯಾಗಿದೆ. ಆದರೆ ತರಕಾರಿಗಳು, ಹಣ್ಣು, ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳ ದರದಲ್ಲಿ ಹೆಚ್ಚಳವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.