ADVERTISEMENT

ಟೊಮೆಟೊ ಪೂರೈಕೆಯಲ್ಲಿ ಹೆಚ್ಚಳ; ದರ ಇಳಿಕೆ

ದೇಶದಲ್ಲಿ ಸರಾಸರಿ ಬೆಲೆ ಕೆ.ಜಿಗೆ ₹52.35

ಪಿಟಿಐ
Published 17 ನವೆಂಬರ್ 2024, 14:00 IST
Last Updated 17 ನವೆಂಬರ್ 2024, 14:00 IST
ಟೊಮೆಟೊ
ಟೊಮೆಟೊ   

ನವದೆಹಲಿ: ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಲ್ಲಿ ಹೆಚ್ಚಳವಾಗಿದ್ದು, ಚಿಲ್ಲರೆ ದರದಲ್ಲಿ ಶೇ 22.4ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಭಾನುವಾರ ತಿಳಿಸಿದೆ. 

ಅಕ್ಟೋಬರ್‌ 14ರಂದು ದೇಶದ ಸರಾಸರಿ ದರ ಕೆ.ಜಿಗೆ ₹67.50 ಇತ್ತು. ನವೆಂಬರ್‌ 14ರಂದು ₹52.35ಕ್ಕೆ ಇಳಿಕೆಯಾಗಿದೆ ಎಂದು ಹೇಳಿದೆ.

ಇದೇ ಅವಧಿಯಲ್ಲಿ ದೆಹಲಿಯ ಆಜಾದ್‌ಪುರ ಮಾರುಕಟ್ಟೆಯಲ್ಲಿ ಮಾದರಿ ದರವು ಪ್ರತಿ ಕ್ವಿಂಟಲ್‌ಗೆ ₹5,883ರಿಂದ ₹2,969ಕ್ಕೆ ಇಳಿಕೆಯಾಗಿದೆ. ಒಟ್ಟಾರೆ ಶೇ 50ರಷ್ಟು ದರ ಕಡಿಮೆಯಾಗಿದೆ ಎಂದು ತಿಳಿಸಿದೆ.

ADVERTISEMENT

ದೇಶದ ಪ್ರಮುಖ ಟೊಮೆಟೊ ಮಾರುಕಟ್ಟೆಗಳಾದ ಮಹಾರಾಷ್ಟ್ರದ ಪಿಂಪಲಗಾಂವ್‌, ಆಂಧ್ರಪ್ರದೇಶದ ಮದನಪಲ್ಲಿ ಹಾಗೂ ಕರ್ನಾಟಕದ ಕೋಲಾರದಲ್ಲೂ ಇಷ್ಟೇ ದರವಿದೆ ಎಂದು ಸಚಿವಾಲಯ ತಿಳಿಸಿದೆ.

ಮದನಪಲ್ಲಿ ಮತ್ತು ಕೋಲಾರದಿಂದ ಟೊಮೆಟೊ ಪೂರೈಕೆಯಲ್ಲಿ ಕಡಿಮೆಯಾಗಿದೆ. ಆದರೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಟೊಮೆಟೊ ಕೊಯ್ಲು ಆರಂಭವಾಗಿದೆ. ಈ ರಾಜ್ಯಗಳಿಂದ ಸರಬರಾಜಾಗುತ್ತಿರುವ ಸರಕು, ದೇಶದಾದ್ಯಂತ ಪೂರೈಕೆಯಲ್ಲಿ ಎದುರಾಗಿದ್ದ ಕೊರತೆಯನ್ನು ನೀಗಿಸಿದೆ. ಹಾಗಾಗಿ, ಧಾರಣೆ ಕಡಿಮೆಯಾಗಿದೆ ಎಂದು ವಿವರಿಸಿದೆ.

ಅಲ್ಲದೆ, ಉತ್ತಮ ಹವಾಮಾನ ಪರಿಸ್ಥಿತಿಯು ಟೊಮೆಟೊ ಬೆಳೆ ಹಾಗೂ ಪೂರೈಕೆ ಸರಪಳಿಗೆ ನೆರವಾಗಿದೆ. ರೈತರ ಜಮೀನಿನಿಂದ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನವು ಸರಾಗವಾಗಿ ತಲುಪುತ್ತಿದೆ ಎಂದು ಹೇಳಿದೆ.

ದೇಶದ ವಿವಿಧೆಡೆ ಟೊಮೆಟೊವನ್ನು ವರ್ಷಪೂರ್ತಿ ಬೆಳೆಯಲಾಗುತ್ತದೆ. ಆದರೆ, ಟೊಮೆಟೊ ಬಹುಬೇಗ ಕೊಳೆತುಹೋಗುವ ಗುಣ ಹೊಂದಿದೆ. ಪ್ರತಿಕೂಲ ಹವಾಮಾನ ಹಾಗೂ ಪೂರೈಕೆಯಲ್ಲಿನ ವ್ಯತ್ಯಯವು ಬೆಲೆಯ ಮೇಲೆ ‍ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

ಅಕ್ಟೋಬರ್‌ನಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿದಿತ್ತು. ಇದರಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯ ಹಾನಿಗೀಡಾಗಿತ್ತು ಎಂದು ಹೇಳಿದೆ.

ಅತಿಹೆಚ್ಚು ಟೊಮೆಟೊ ಉತ್ಪಾದಿಸುವ ರಾಜ್ಯಗಳಲ್ಲಿ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಟೊಮೆಟೊ ಸಸಿ ನಾಟಿ ಮಾಡಲಾಗುತ್ತದೆ ಎಂದು ವಿವರಿಸಿದೆ.

2023–24ರಲ್ಲಿ ದೇಶದಲ್ಲಿ ಒಟ್ಟು 213.20 ಲಕ್ಷ ಟನ್‌ ಟೊಮೆಟೊ ಉತ್ಪಾದನೆಯಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.