ದಾವಣಗೆರೆ: ಜಿಲ್ಲೆಯ ಮಲೇಬೆನ್ನೂರಿನ ಅಕ್ಕಿ ರಾಜ್ಯದಲ್ಲೇ ಪ್ರಸಿದ್ಧಿ. ಇಲ್ಲಿನ ಅಕ್ಕಿಗೆ ಭಾರಿ ಬೇಡಿಕೆ ಇದೆ. ಒಂದು ಕಾಲದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಕ್ಕಿ ಗಿರಣಿಗಳು ಇದೀಗ ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ.ಹಿಂದೆ ಸುಮಾರು 15 ಅಕ್ಕಿ ಗಿರಣಿಗಳಿದ್ದವು.ಈಗ ಮೂರು ಗಿರಣಿಗಳು ಮಾತ್ರ ಉಳಿದಿವೆ.
1969ರಿಂದೀಚೆಗೆ ಆರಂಭವಾದ ಅಕ್ಕಿ ಗಿರಣಿಗಳು ಉತ್ತುಂಗದಲ್ಲಿದ್ದವು. ಆದರೆ 3 ವರ್ಷಗಳಿಂದೀಚೆಗೆ ನಿಧಾನವಾಗಿ ಮರೆಗೆ ಸರಿಯುತ್ತಿವೆ. ಪ್ರಸಿದ್ಧಿ ಪಡೆದಿದ್ದ ದಾಂಡೇಕರ್ ಮಿಲ್, ಬಿನ್ನಿ ಮಾರ್ಟ್‌ನ ರೈಸ್‌ಮಿಲ್‌ನಂತಹ ದೊಡ್ಡ ದೊಡ್ಡ ಗಿರಣಿಗಳು ಮುಚ್ಚಿವೆ.
ಇದಕ್ಕೆ ಜಿಎಸ್‌ಟಿ, ನೋಟು ರದ್ದತಿ, ಆರ್ಥಿಕ ಹಿಂಜರಿತದ ಕಾರಣವಲ್ಲದೇ ಪರಿಸರ ಕಾಯ್ದೆ, ಉಚಿತ ಅಕ್ಕಿ ನೀಡುವ ಸರ್ಕಾರದ ಯೋಜನೆಗಳು, ಇಲ್ಲಿ ಬಂದ ಲಾಭವನ್ನು ಬೇರೆಡೆ ತೊಡಗಿಸಿಕೊಂಡ ಮಾಲೀಕರ ನೀತಿಯೂ ಕಾರಣವಾಗಿದೆ.
ಗಿರಣಿಯ ದೂಳಿನಿಂದ ಪರಿಸರ ಮಾಲಿನ್ಯವಾಗುವ ಕಾರಣ ಗಿರಣಿಗಳನ್ನು ಊರ ಹೊರಗೆ ಮಾಡಬೇಕೆಂಬ ಪರಿಸರ ಕಾಯ್ದೆ ಜಾರಿಗೆ ಬಂದಿದೆ. ಇದೂ ಮಾಲೀಕರು ಹಿಂದೇಟು ಹಾಕಲು ಕಾರಣ. ಒಂದು ಗಿರಣಿಯಲ್ಲಿ 100ಕ್ಕೂ ಅಧಿಕ ಜನ ಕಾರ್ಮಿಕರಿದ್ದರು. ಆದರೆ ಈಗ 20 ಜನರಿಗೂ ಕೆಲಸ ಕೊಡದ ಸ್ಥಿತಿ ಇದೆ. ಜಿಲ್ಲೆಯಲ್ಲಿದ್ದ 140 ಗಿರಣಿಗಳಲ್ಲಿ ಉಳಿದಿರುವುದು 40 ಮಾತ್ರ.
‘ಶೇ 70ರಷ್ಟು ಅಕ್ಕಿ ಉದ್ಯಮ ಅವನತಿಯ ಅಂಚಿಗೆ ತಲುಪಿದೆ. ಕಾರ್ಪೊರೇಟ್ ಕಂಪನಿಗಳಿಗೆ ಅನ್ವಯಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆಗಳ ಮೇಲೆ ಹೇರಿದೆ. 10 ಲಾರಿ ಅಕ್ಕಿ ಮಾರುತ್ತಿದ್ದವರು ಒಂದು ಲಾರಿಯಷ್ಟನ್ನು ಮಾರುವುದಕ್ಕೂ ಪರದಾಡುವಂತಾಗಿದೆ’ ಎಂದು ಹೇಳುತ್ತಾರೆ ಅಕ್ಕಿ ಗಿರಣಿ ಮಾಲೀಕ ವಾಗೀಶಸ್ವಾಮಿ.
‘ನಮ್ಮೂರಿನ ಅಕ್ಕಿಗೆ ಈಗಲೂ ಬೇಡಿಕೆ ಇದೆ. ಆದರೆ ಸರ್ಕಾರಗಳ ಅಸಮರ್ಪಕ ನೀತಿ, ಆರ್ಥಿಕ ಉತ್ತೇಜನಕ್ಕೆ ಕ್ರಮ ಕೈಗೊಳ್ಳದಿರುವುದೇ ಗಿರಣಿಗಳು ಮುಚ್ಚಲು ಕಾರಣ’ ಎಂದು ದೂರುತ್ತಾರೆ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಿ. ಚಿದಾನಂದಪ್ಪ.
‘ಅಕ್ಕಿ ಮಿಲ್‌ಗಳಲ್ಲಿ ಪಡೆದ ಲಾಭವನ್ನು ಕೆಲವರು ರಿಯಲ್ ಎಸ್ಟೇಟ್‌ಗೆ ಹಾಕಿದರು. ನೋಟು ರದ್ದತಿ ಬಳಿಕ ನಷ್ಟ ಅನುಭವಿಸಿದರು. ಗುಣಮಟ್ಟದ ಅಕ್ಕಿ ತಯಾರಿಸದೆ ಖರೀದಿಸಿ ಮಾರಾಟ ಮಾಡಿದ್ದೂ ನಷ್ಟಕ್ಕೆ ಕಾರಣ ಎನ್ನುತ್ತಾರೆ’ ಎಪಿಎಂಸಿ ನಿರ್ದೇಶಕ ಕೋಮಾರನಹಳ್ಳಿಯ ಜಿ. ಮಂಜುನಾಥ ಪಟೇಲ್.
*
ಕೇಂದ್ರದ ಜಿಎಸ್‌ಟಿ, ನೋಟು ರದ್ದತಿ, ಆರ್ಥಿಕ ಉತ್ತೇಜನಕ್ಕೆ ಕ್ರಮ ಕೈಗೊಳ್ಳದಿರುವುದೇ ಗಿರಣಿಗಳು ಬಾಗಿಲು ಮುಚ್ಚಲು ಕಾರಣ.
-ಬಿ. ಚಿದಾನಂದಪ್ಪ, ಉಪಾಧ್ಯಕ್ಷ, ಅಕ್ಕಿ ಗಿರಣಿ ಮಾಲೀಕರ ಸಂಘ, ರಾಜ್ಯ ಘಟಕ
*
ಕೊನೆಭಾಗದ ರೈತರಿಗೆ ಭದ್ರಾ ನೀರು ಸಿಗದೆ ಭತ್ತದ ಇಳುವರಿ ಕಡಿಮೆಯಾಗಿದೆ. ಅಕ್ಕಿ ರಫ್ತು ನಿಂತಿದೆ.
- ಪ್ರಭುಗೌಡ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.