ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ (ಆರ್‌ಐಎಲ್) ಸಾಲದ ಹೊರೆ ತಗ್ಗಿಸಲು ತೈಲ ಮತ್ತು ರಾಸಾಯನಿಕಗಳ ಹಾಗೂ ಇಂಧನ ಮಾರಾಟ ಜಾಲದ ವಹಿವಾಟಿನಲ್ಲಿನ ಕೆಲ ಪಾಲು ಬಂಡವಾಳವನ್ನು ಕ್ರಮವಾಗಿ ಅರಾಮ್ಕೊ ಮತ್ತು ಬಿಪಿಗೆ ಮಾರಾಟ ಮಾಡಲು ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ.
ಸೌದಿ ಅರೇಬಿಯಾದ ತೈಲ ದೈತ್ಯ ಸಂಸ್ಥೆ ಅರಾಮ್ಕೊಗೆ ಶೇ 20 ಮತ್ತು ಬ್ರಿಟನ್ನಿನ ಬಹುರಾಷ್ಟ್ರೀಯ ತೈಲ ಮತ್ತು ನೈಸರ್ಗಿಕ ಕಂಪನಿ ಬಿಪಿಗೆ ಶೇ 49ರಷ್ಟು ಪಾಲನ್ನು ಮಾರಾಟ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.
‘ಈ ಎರಡೂ ಪಾಲು ಮಾರಾಟದ ಫಲವಾಗಿ ಆರ್‌ಐಎಲ್ ಒಂದೂವರೆ ವರ್ಷದಲ್ಲಿ ಸಂಪೂರ್ಣ ಸಾಲ ಮುಕ್ತ ಕಂಪನಿಯಾಗಿ ಹೊರಹೊಮ್ಮಲಿದೆ’ ಎಂದು ಮುಕೇಶ್ ಅವರು ಇಲ್ಲಿ ನಡೆದ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಕಟಿಸಿದರು.
ದೂರಸಂಪರ್ಕ, ರಿಟೇಲ್ ವಹಿವಾಟು ಒಳಗೊಂಡಂತೆ ಆರ್‌ಐಎಲ್ ಉದ್ದಿಮೆಯ ಒಟ್ಟಾರೆ ಮೌಲ್ಯವು ₹ 9.38 ಲಕ್ಷ ಕೋಟಿಗಳಷ್ಟಿದೆ.
ಸಾಲದ ಹೊರೆಗೆ ಕಳವಳ: ಕಂಪನಿ ಸಾಲದ ಪ್ರಮಾಣದ ಬಗ್ಗೆ ವಹಿವಾಟು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದರು. ಸಾಲದ ಪ್ರಮಾಣ ಹೆಚ್ಚಳವು ಕಂಪನಿಯ ಬೆಳವಣಿಗೆಗೆ ಅಡ್ಡಿಪಡಿಸಲಿದೆ ಎಂದು ಕ್ರೆಡಿಟ್ ಸ್ಯೂಸ್ ಗ್ರೂಪ್ ಎಜಿ ಮೊನ್ನೆಯಷ್ಟೇ ಅಭಿಪ್ರಾಯಪಟ್ಟಿತ್ತು.
‘ಇದೊಂದು ಕಂಪನಿಯ ಇತಿಹಾಸ ದಲ್ಲಿನ ಅತಿದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಯಾಗಿದೆ. ಸಾಲದ ಹೊರೆ ಬಗ್ಗೆ ಆತಂಕ ಪಡಬೇಕಾಗಿಲ್ಲ’ ಎಂದು ಮುಕೇಶ್ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.