ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಭರಾಟೆ ಹೆಚ್ಚುತ್ತಿದೆ. ನಗರಗಳಲ್ಲಂತೂ ಎಲ್ಲ ವಸ್ತುಗಳೂ ಮನೆ ಬಾಗಿಲಿಗೇ ಬರಬೇಕು ಎನ್ನುವ ಮನಸ್ಥಿತಿ ಹೆಚ್ಚಿನದವರದ್ದಾಗಿದೆ. ಇದರ ಪರಿಣಾಮ ದೇಶದಾದ್ಯಂತ ಒಂದೇ ವರ್ಷದಲ್ಲಿ ಸುಮಾರು 2 ಲಕ್ಷ ಕಿರಾಣಿ ಅಂಗಡಿಗಳು ಬಂದ್ ಆಗಿವೆ ಎಂದು ತಿಳಿದುಬಂದಿದೆ.
ಅಖಿಲ ಭಾರತ ಗ್ರಾಹಕ ವಸ್ತುಗಳ ಪೂರೈಕೆ ಸಂಘಟನೆ (AICPDF) ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ತಿಳಿದು ಬಂದಿದೆ. ಅದರಲ್ಲೂ ಹಬ್ಬಗಳ ಸಂದರ್ಭಗಳಲ್ಲಿ ಜನ ಆನ್‌ಲೈನ್‌ನಲ್ಲಿ ಖರೀದಿ ಮಾಡುವುದೇ ಹೆಚ್ಚಾಗಿದೆ. ಇದು ಗ್ರಾಹಕರ ಖರೀದಿಯ ಮೂಲ ಮತ್ತು ಆದಾಯಕ್ಕೆ ದೊಡ್ಡ ಹೊಡೆತ ಕೊಡುತ್ತಿದೆ ಎನ್ನುತ್ತಾರೆ AICPDFನ ರಾಷ್ಟ್ರೀಯ ಅಧ್ಯಕ್ಷ ಧೈರ್ಯಶೀಲ್ ಪಾಟೀಲ್.
ಪ್ರಸ್ತುತ, ಭಾರತದಲ್ಲಿ ಸುಮಾರು 1.30 ಕೋಟಿ ಕಿರಾಣಿ ಮಳಿಗೆಗಳಿವೆ ಎಂದು ಅಂದಾಜಿಸಲಾಗಿದ್ದು, ಅವುಗಳಲ್ಲಿ 1 ಕೋಟಿಗೂ ಅಧಿಕ ಎರಡನೇ ಹಂತದ ನಗರಗಳಲ್ಲಿ ಮತ್ತು ಸಣ್ಣ ನಗರಗಳಲ್ಲಿವೆ.
ಆನ್‌ಲೈನ್‌ನಲ್ಲಿ ಭಾರಿ ಪ್ರಮಾಣದಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಹೆಸರಿನಲ್ಲಿ, ತಲೆಮಾರುಗಳವರೆಗೆ ವಸ್ತುಗಳ ಖರೀದಿಗೆ ಮೂಲವಾಗಿದ್ದ ಚಿಲ್ಲರೆ ಅಂಗಡಿಗಳಲ್ಲಿ ವ್ಯಾಪಾರಕ್ಕೆ ಧಕ್ಕೆ ಉಂಟಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಆದ್ಯತೆಗಳೂ ಬದಲಾಗಿವೆ. ವಸ್ತುಗಳು ಬೇಕೆನಿಸಿದಾಗ ಕುಳಿತಲ್ಲೇ ಸಿಗಬೇಕು, ಅದಕ್ಕೆ ರಿಯಾಯಿತಿಯೂ ಇರಬೇಕು ಎನ್ನುವುದೇ ಖರೀದಿಯ ಮೂಲಮಂತ್ರವಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಆನ್‌ಲೈನ್ ಪ್ಲಾಟ್‌ಫಾರ್ಮಗಳಲ್ಲಿ ಬ್ರ್ಯಾಂಡ್ ವಸ್ತುಗಳ ಮಾರಾಟ ಶೇ 250ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಮಹಾನಗರಗಳಲ್ಲೇ ಹೆಚ್ಚು ಇ –ಕಾಮರ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ನಗರಗಳಲ್ಲಿಯೇ 90 ಸಾವಿರ ಕಿರಾಣಿ ಅಂಗಡಿಗಳು ಬಂದ್ ಆಗಿವೆ. ಇನ್ನು ಸಣ್ಣ ನಗರಗಳಲ್ಲಿ ಸುಮಾರು 50 ಸಾವಿರ ಮಳಿಗೆಗಳಿಗೆ ಬೀಗ ಬಿದ್ದಿದೆ ಎಂದು ವರದಿ ಹೇಳಿದೆ.
ಮುಖ್ಯವಾಗಿ ಮಹಾ ನಗರಗಳಲ್ಲಿ ಬ್ಲಿಂಕಿಟ್, ಸ್ವಿಗ್ಗಿ, ಜೆಪ್ಟೊ ಕಂಪನಿಗಳು ಕಿರಾಣಿ ಅಂಗಡಿಗಳ ವ್ಯಾಪಾರಕ್ಕೆ ಹೆಚ್ಚಿನ ಹೊಡೆತ ನೀಡುತ್ತಿವೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.