ನವದೆಹಲಿ: ದ್ವಿಚಕ್ರ ವಾಹನ ಸವಾರರ ಜೀವಕ್ಕೆ ಸಂಚಕಾರ ತರುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ತಯಾರಿಸುವವರು ಮತ್ತು ಮಾರಾಟಗಾರರ ವಿರುದ್ಧ ಕೇಂದ್ರ ಸರ್ಕಾರವು, ದೇಶದಾದ್ಯಂತ ಕಾರ್ಯಾಚರಣೆ ಹಮ್ಮಿಕೊಂಡಿದೆ.
ಹೆಲ್ಮೆಟ್‌ಗೆ ಬಿಐಎಸ್ (ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನ್ಯತೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ರಸ್ತೆ ಸುರಕ್ಷತೆಗೆ ಒತ್ತು ನೀಡುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
ಬಿಐಎಸ್ ಮಾನ್ಯತೆ ಉಲ್ಲಂಘನೆ ಸಂಬಂಧ 27 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. 162 ಹೆಲ್ಮೆಟ್ ತಯಾರಕರ ಪರವಾನಗಿ ರದ್ದು ಅಥವಾ ಪರವಾನಗಿ ನವೀಕರಣ ಮಾಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
‘ಗುಣಮಟ್ಟದ ಹೆಲ್ಮೆಟ್‌ನಿಂದ ಸವಾರರ ಜೀವ ಉಳಿಯುತ್ತದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವುದೇ ಈ ಕಾರ್ಯಾಚರಣೆಯ ಉದ್ದೇಶವಾಗಿದೆ’ ಎಂದು ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು 2021ರ ಜೂನ್‌ನಲ್ಲಿ ಹೆಲ್ಮೆಟ್‌ಗಳಿಗೆ ಸಂಬಂಧಿಸಿದಂತೆ ಗುಣಮಟ್ಟ ನಿಯಂತ್ರಣ ಆದೇಶವನ್ನು ಹೊರಡಿಸಿದೆ. ಹೆಲ್ಮೆಟ್ ತಯಾರಿಸುವವರು ಬಿಐಎಸ್ ಮಾನದಂಡ (ಐಎಸ್ 4151:2015) ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
1988ರ ಮೋಟರ್ ವಾಹನಗಳ ಕಾಯ್ದೆ ಪ್ರಕಾರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ.
ರಸ್ತೆಬದಿ ಮಾರಾಟ ಅವ್ಯಾಹತ
ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳಿಂದ ರಸ್ತೆ ಅಪಘಾತದ ವೇಳೆ ಸಾಕಷ್ಟು ಸವಾರರು ಮೃತಪಡುತ್ತಾರೆ. ರಸ್ತೆ ಬದಿಯಲ್ಲಿ ಪ್ರಮಾಣೀಕರಿಸದ ಹೆಲ್ಮೆಟ್ ಮಾರಾಟ ಮಾಡುವವರನ್ನು ಗುರಿಯಾಗಿಟ್ಟುಕೊಂಡು ಅಧಿಕಾರಿಗಳು ದಾಳಿ ನಡೆಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಗ್ರಾಹಕರು ಖರೀದಿಗೂ ಮೊದಲು ಬಿಐಎಸ್ ಕೇರ್ ಆ್ಯಪ್ ಅಥವಾ ವೆಬ್‌ಸೈಟ್‌ಗೆ ತೆರಳಿ ಪರೀಕ್ಷಿಸಬೇಕಿದೆ ಎಂದು ಸಲಹೆ ನೀಡಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಪೊಲೀಸರು ಮತ್ತು ಬಿಐಎಸ್ ಅಧಿಕಾರಿಗಳ ಜೊತೆಗೂಡಿ ಕಾರ್ಯಾಚರಣೆ ನಡೆಸಬೇಕಿದೆ. ಸ್ಥಳೀಯ ಆಡಳಿತದ ನೆರವು ಕೂಡ ಪಡೆಯಬೇಕಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.