ಮುಂಬೈ: ರದ್ದುಗೊಂಡಿರುವ ₹ 2 ಸಾವಿರ ಮುಖಬೆಲೆಯ ಶೇ 97.92ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ. ₹7,409 ಕೋಟಿ ಮೌಲ್ಯದ ನೋಟುಗಳಷ್ಟೇ ಸಾರ್ವಜನಿಕರ ಬಳಿ ಇದೆ ಎಂದು ಆರ್‌ಬಿಐ ಹೇಳಿದೆ.
₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂದು 2023ರ ಮೇ 19ರಂದು ಆರ್‌ಬಿಐ ಘೋಷಣೆ ಮಾಡಿತ್ತು.
ಆ ದಿನ ವಹಿವಾಟು ಅಂತ್ಯದ ವೇಳೆ ₹3.56 ಲಕ್ಷ ಕೋಟಿ ಮೌಲ್ಯದ ₹ 2 ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. 2024 ಜುಲೈ 31ರಂದು ವಹಿವಾಟು ಅಂತ್ಯಗೊಂಡಾಗ ಅದು ₹ 7,409 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಹೀಗಾಗಿ ಶೇ 97.92ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
2023ರ ಅಕ್ಟೋಬರ್ 7ರವರೆಗೂ ಬ್ಯಾಂಕ್‌ಗಳಲ್ಲಿ ₹2 ಸಾವಿರ ಮೌಲ್ಯದ ನೋಟುಗಳನ್ನು ಠೇವಣಿ ಇಡಲು ಹಾಗೂ ಬದಲಾಯಿಸಿಕೊಳ್ಳಲು ಅವಕಾಶ ನೀಡಿತ್ತು. ಆ ಬಳಿಕ ಆರ್‌ಬಿಐನ ವಿತರಣಾ ಕಚೇರಿಗಳು ನೋಟುಗಳನ್ನು ಸ್ವೀಕರಿಸುತ್ತಿವೆ.
2016ರ ನವೆಂಬರ್‌ನಲ್ಲಿ ₹1 ಸಾವಿರ ಹಾಗೂ ₹ 500 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ₹ 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು.
ಬೆಂಗಳೂರು, ಬೆಲಾಪುರ, ಭೋಪಾಲ್, ಭುವನೇಶ್ವರ, ಚಂಡೀಗಢ, ಚೆನ್ನೈ, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ, ಕೋಲ್ಕತ್ತ, ಅಹಮದಾಬಾದ್, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ಪಟ್ನಾ ಹಾಗೂ ತಿರುವನಂತಪುರದಲ್ಲಿರುವ ಆರ್‌ಬಿಐ ಕಚೇರಿಗಳಲ್ಲಿ ಹಣ ಬದಲಾಯಿಸಿಕೊಳ್ಳಲು ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.