ನವದೆಹಲಿ: ರುಪೇ ಡೆಬಿಟ್ ಕಾರ್ಡ್ ಬಳಕೆ ಹಾಗೂ ಸಣ್ಣ ಮೊತ್ತದ ಭೀಮ್–ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಕೇಂದ್ರ ಸಚಿವ ಸಂಪುಟವು ₹ 2,600 ಕೋಟಿ ವಿನಿಯೋಗಿಸಲು ಬುಧವಾರ ಅನುಮೋದನೆ ನೀಡಿದೆ. ಈ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಲ್ಲೇ ವಿನಿಯೋಗಿಸಲಾಗುತ್ತದೆ.
ರುಪೇ ಕಾರ್ಡ್ ಹಾಗೂ ಯುಪಿಐ ಬಳಕೆಯನ್ನು ಇ–ವಾಣಿಜ್ಯ ವೇದಿಕೆಗಳಲ್ಲಿ ಮತ್ತು ಮಳಿಗೆಗಳಲ್ಲಿ ಉತ್ತೇಜಿಸಲು ಬ್ಯಾಂಕ್‌ಗಳಿಗೆ ಹಣಕಾಸು ಸಹಾಯವನ್ನು ಈ ಯೋಜನೆಯ ಅಡಿಯಲ್ಲಿ ಒದಗಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
‘ಇಂದಿನ ತೀರ್ಮಾನದ ಪರಿಣಾಮವಾಗಿ ಡಿಜಿಟಲ್ ಪಾವತಿಗಳಲ್ಲಿ ಭಾರತ ಹೆಜ್ಜೆಗಳು ಇನ್ನಷ್ಟು ಗಟ್ಟಿಯಾಗಲಿವೆ’ ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಯುಪಿಐ ವ್ಯವಸ್ಥೆಯ ಮೂಲಕ ಒಟ್ಟು ₹ 12.82 ಲಕ್ಷ ಕೋಟಿ ಮೌಲ್ಯದ 782.9 ಕೋಟಿ ವಹಿವಾಟು ನಡೆದಿವೆ.
ಎನ್‌ಆರ್‌ಐಗಳಿಗೂ ಯುಪಿಐ: ಅಮೆರಿಕ, ಕೆನಡಾ, ಯುಎಇ ಸೇರಿದಂತೆ ಒಟ್ಟು 10 ದೇಶಗಳ ಅನಿವಾಸಿ ಭಾರತೀಯರು ಯುಪಿಐ ಬಳಸಿ ತಮ್ಮ ಎನ್‌ಆರ್‌ಇ/ಎನ್‌ಆರ್‌ಒ ಖಾತೆಯಿಂದ ಹಣ ವರ್ಗಾವಣೆ ಮಾಡಲು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಅವಕಾಶ ಕಲ್ಪಿಸಿದೆ.
ಅನಿವಾಸಿ ಭಾರತೀಯರು ಯುಪಿಐ ಬಳಸಿ ಹಣ ವರ್ಗಾವಣೆ ಮಾಡಲು ಅಗತ್ಯವಿರುವ ಸೌಲಭ್ಯವನ್ನು ಏಪ್ರಿಲ್ 30ರೊಳಗೆ ಕಲ್ಪಿಸಬೇಕು ಎಂದು ಎನ್‌ಪಿಸಿಐ ಸುತ್ತೋಲೆ ಹೇಳಿದೆ. ಸಿಂಗಪುರ, ಆಸ್ಟ್ರೇಲಿಯಾ, ಹಾಂಗ್‌ಕಾಂಗ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಬ್ರಿಟನ್‌ನಲ್ಲಿ ಇರುವವರಿಗೂ ಇದು ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.