ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ 2ನೇ ಆಡಳಿತದ ಅವಧಿಯಲ್ಲಿ ರೂಪಾಯಿ ಮೌಲ್ಯ ಶೇ 8ರಿಂದ ಶೇ 10ರಷ್ಟು ಕುಸಿಯಬಹುದು ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ.
‘ಅಮೆರಿಕದ ಅಧ್ಯಕ್ಷೀಯ ಚುನಾವಣೆ 2024: ಟ್ರಂಪ್ 2.0 ಭಾರತ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ’ ಎಂಬ ವರದಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆಯಾಗಲಿದೆ. ನಂತರ ಏರಿಕೆಯಾಗಬಹುದು ಎಂದು ಹೇಳಲಾಗಿದೆ. ವರದಿಯು ಸೋಮವಾರ ಬಿಡುಗಡೆಯಾಗಿದೆ.
ಟ್ರಂಪ್ ಗೆಲುವು ಭಾರತಕ್ಕೆ ಸವಾಲುಗಳು ಮತ್ತು ಅವಕಾಶಗಳನ್ನು ಪರಿಚಯಿಸುತ್ತದೆ. ವಿದೇಶಿ ನೇರ ಹೂಡಿಕೆಗಳಲ್ಲಿ ಬದಲಾವಣೆ, ಸುಂಕದ ಹೆಚ್ಚಳ, ಎಚ್–1ಬಿ ನಿರ್ಬಂಧ, ದೃಢವಾದ ಡಾಲರ್ ಮೌಲ್ಯ ಅಲ್ಪಾವಧಿ ಚಂಚಲತೆಯನ್ನು ಸೃಷ್ಟಿಸಲಿದೆ ಎಂದು ಹೇಳಿದೆ.
ಟ್ರಂಪ್ ಮೊದಲ ಅವಧಿಯ ಆಡಳಿತದಲ್ಲಿ ರೂಪಾಯಿ ಮೌಲ್ಯ ಶೇ 11ರಷ್ಟು ಇಳಿಕೆಯಾಗಿತ್ತು. ರೂಪಾಯಿ ಮೌಲ್ಯದ ಇಳಿಕೆಯಿಂದ ತೈಲ ಮತ್ತು ಇತರೆ ಸರಕುಗಳ ಆಮದು ವೆಚ್ಚ ಹೆಚ್ಚಳವಾಗಲಿದೆ. ಅಂದಾಜಿನ ಪ್ರಕಾರ ಶೇ 5ರಷ್ಟು ಮೌಲ್ಯ ಇಳಿಕೆಯಾದರೂ ಹಣದುಬ್ಬರವು ಶೇ 0.25 ರಿಂದ ಶೇ 0.30ರಷ್ಟು (25ರಿಂದ 30 ಬಿಪಿಎಸ್) ಹೆಚ್ಚಳವಾಗಲಿದೆ. ಆದರೆ ಇದು ಹಣದುಬ್ಬರದ ಮೇಲೆ ಕಡಿಮೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಭಾರತವು ತನ್ನ ಎಫ್‌ಡಿಐ ಮೂಲಗಳನ್ನು ಕ್ರಮೇಣವಾಗಿ ವೈವಿಧ್ಯಗೊಳಿಸುತ್ತಿದೆ. ದಶಕದ ಹಿಂದೆ, ಹೆಚ್ಚಿನ ಎಫ್‌ಡಿಐ ಒಳಹರಿವು ಸಾಂಪ್ರದಾಯಿಕ ಕ್ಷೇತ್ರಗಳಿಂದ ಬರುತ್ತಿತ್ತು. ಭಾರತವು ಈಗ ನವೀಕರಿಸಬಹುದಾದ ಇಂಧನ ಸೇರಿದಂತೆ ಹಲವು ವಲಯಗಳಿಂದ ಹೂಡಿಕೆಯನ್ನು ಆಕರ್ಷಿಸುತ್ತಿದೆ. ಇದರಿಂದ ರೂಪಾಯಿ ಮೌಲ್ಯ ವೃದ್ಧಿಯಾಗಲಿದೆ ಎಂದು ವರದಿ ಹೇಳಿದೆ.
ವಿದೇಶಿ ಬಂಡವಾಳದ ಹೊರಹರಿವು ಮತ್ತು ಷೇರು ಸೂಚ್ಯಂಕಗಳ ಇಳಿಕೆಯಿಂದ ಸೋಮವಾರ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು 1 ಪೈಸೆ ಕುಸಿದಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆ ಯಲ್ಲಿ ವಹಿವಾಟಿನ ಅಂತ್ಯಕ್ಕೆ ₹84.38 ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.