ADVERTISEMENT

ಅಲ್ಪಾವಧಿಯಲ್ಲಿ 82ಕ್ಕೆ ಕುಸಿಯಲಿದೆ ರೂಪಾಯಿ

ಹಿಗ್ಗಿದ ವ್ಯಾಪಾರ ಕೊರತೆ ಅಂತರ: ಬಡ್ಡಿದರ ಹೆಚ್ಚಳ ನಿರೀಕ್ಷೆ

ಪಿಟಿಐ
Published 24 ಜುಲೈ 2022, 19:30 IST
Last Updated 24 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ರೂಪಾಯಿಯುಅಲ್ಪಾವಧಿಯಲ್ಲಿ ಅಮೆರಿಕದ ಡಾಲರ್‌ ಎದುರು ₹ 82ಕ್ಕೆ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ವ್ಯಾಪಾರ ಕೊರತೆ ಅಂತರ ಹೆಚ್ಚಾಗುತ್ತಿರುವುದು ಹಾಗೂ ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಫೆಡರಲ್‌ ರಿಸರ್ವ್‌ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡುವ ನಿರೀಕ್ಷೆ ಇದೆ. ಈ ಕಾರಣಗಳಿಂದಾಗಿ ರೂಪಾಯಿ ಮೌಲ್ಯವು ₹ 82ಕ್ಕೆ ಕುಸಿಯಲಿದೆ ಎಂದು ತಿಳಿಸಿದ್ದಾರೆ.

ಫೆಡರಲ್‌ ರಿಸರ್ವ್‌ ಇದೇ 26 ಮತ್ತು 27ರಂದು ಸಭೆ ಸೇರಲಿದ್ದು, ಬಡ್ಡಿದರವನ್ನು ಶೇ 0.50 ರಿಂದ ಶೇ 0.75ರವರೆಗೆ ಹೆಚ್ಚಿಸಲಿದೆ ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ. ಇದರಿಂದಾಗಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಬಂಡವಾಳ ಹಿಂತೆಗೆತ ಆಗಲಿದೆ.

ADVERTISEMENT

ಡಾಲರ್‌ ಹೊರಹರಿವು ಮತ್ತು ಕಚ್ಚಾ ತೈಲ ದರವು ನಿರೀಕ್ಷೆಗಿಂತ ಹೆಚ್ಚಿನ ಏರಿಕೆ ಕಂಡಿರುವುದರಿಂದ ರೂಪಾಯಿ ಮೌಲ್ಯವು ಇನ್ನಷ್ಟು ಇಳಿಕೆ ಆಗಲಿದೆ. ಕಳೆದ ವಾರ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹ 80.06ಕ್ಕೆ ಕುಸಿದಿತ್ತು.

‘ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಡಾಲರ್‌ ಎದುರು ರೂಪಾಯಿಯು ₹ 81ಕ್ಕೂ ಹೆಚ್ಚಿನ ಇಳಿಕೆ ಕಾಣಲಿದೆ. ವರ್ಷಾಂತ್ಯದ ವೇಳೆಗೆ ₹ 79ರ ಆಸುಪಾಸಿನಲ್ಲಿ ಇರಲಿದೆ’ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್ ರಿಸರ್ಚ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಸುನಿಲ್‌ ಕುಮಾರ್‌ ಸಿನ್ಹಾ ಹೇಳಿದ್ದಾರೆ.

ವಿದೇಶಿ ಬಂಡವಾಳ ಒಳಹರಿವಿನಲ್ಲಿ ಇಳಿಕೆ ಕಂಡಿರುವುದು ಹಾಗೂ ‌ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಬಡ್ಡಿದರದಲ್ಲಿ ಮಾಡಲಿರುವ ಏರಿಕೆಯನ್ನೂ ಒಳಗೊಂಡು ಇನ್ನೂ ಹಲವು ಅಂಶಗಳಿಂದಾಗಿ ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ರೂಪಾಯಿಯು ₹82ಕ್ಕೆ ಕುಸಿತ ಕಾಣಲಿದೆ ಎಂದು ನೂಮುರಾ ಸಂಸ್ಥೆ ಅಂದಾಜಿಸಿದೆ.

ಅಲ್ಪಾವಧಿಯಲ್ಲಿ ರೂಪಾಯಿಯು ಒತ್ತಡದಲ್ಲಿಯೇ ಇರಲಿದೆ. ರೂಪಾಯಿ–ಡಾಲರ್‌ ವಿನಿಮಯ ದರವು ಅಸ್ಥಿರವಾಗಿಯೇ ಇರಲಿದೆ ಎಂದು ಕ್ರಿಸಿಲ್‌ ಸಂಸ್ಥೆ ಹೇಳಿದೆ. ‘ಕಚ್ಚಾ ತೈಲ ದರ ಇಳಿಕೆ ಆಗುವ ನಿರೀಕ್ಷೆ ಇದ್ದು, ಫೆಡರಲ್‌ ರಿಸರ್ವ್‌ ತ್ವರಿತವಾಗಿ ಬಡ್ಡಿದರ ಏರಿಕೆ ಮಾಡುವುದನ್ನು ನಿಲ್ಲಿಸುವುದರಿಂದ ಪ್ರಸ್ತಕ ಹಣಕಾಸು ವರ್ಷದ ಅಂತ್ಯಕ್ಕೆ ರೂಪಾಯಿ ಮೇಲಿನ ಒತ್ತಡ ಕಡಿಮೆ ಆಗಬಹುದು' ಎಂದು ಕ್ರಿಸಿಲ್‌ನ ಮುಖ್ಯ ಆರ್ಥಿಕ ತಜ್ಞೆ ದೀಪ್ತಿ ದೇಶಪಾಂಡೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.