ADVERTISEMENT

US election | ಟ್ರಂಪ್‌ ಗೆಲುವು ಬೆನ್ನಲ್ಲೇ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ

ಪಿಟಿಐ
Published 6 ನವೆಂಬರ್ 2024, 14:30 IST
Last Updated 6 ನವೆಂಬರ್ 2024, 14:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ/ ನವದೆಹಲಿ: ಅಮೆರಿಕದ ಡಾಲರ್‌ ಎದುರು ಬುಧವಾರ ರೂಪಾಯಿ ಮೌಲ್ಯವು 21 ಪೈಸೆ ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹84.30 ಆಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ ಗೆಲುವು ಸಾಧಿಸಿದ್ದಾರೆ. ಇದರಿಂದ ಡಾಲರ್‌ ಸೂಚ್ಯಂಕವು ಏರಿಕೆ ಪಥದಲ್ಲಿ ಸಾಗಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆದ ಫೆಡರಲ್‌ ರಿಸರ್ವ್‌ 2025ನೇ ಸಾಲಿನಲ್ಲಿ ಶೇ 1ರಷ್ಟು ಬಡ್ಡಿದರ ಕಡಿತಗೊಳಿಸುವ ಗುರಿ ಹೊಂದಿದೆ. ಹಾಗಾಗಿ, ಗುರುವಾರ ನಡೆಯಲಿರುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರ ಕಡಿತಕ್ಕೆ ಕ್ರಮವಹಿಸುವ ಸಾಧ್ಯತೆಯಿದೆ. ಇದು ಕೂಡ ಡಾಲರ್‌ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ರಫ್ತುದಾರರಿಗೆ ಸಂಕಷ್ಟ:

ಟ್ರಂಪ್‌ ಅವರ ‘ಅಮೆರಿಕವೇ ಮೊದಲು’ ಎಂಬ ಕಾರ್ಯಸೂಚಿ ಜಾರಿಗೊಂಡರೆ ಭಾರತದ ಆಟೊಮೊಬೈಲ್‌, ಜವಳಿ ಮತ್ತು ಔಷಧ ರಫ್ತುದಾರರಿಗೆ ಹೆಚ್ಚಿನ ಪೆಟ್ಟು ಬೀಳಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಈ ವಲಯದ ರಫ್ತಿನ ಮೇಲೆ ಹೆಚ್ಚಿನ ಕಸ್ಟಮ್ಸ್ ಸುಂಕ ವಿಧಿಸಲಾಗುತ್ತದೆ. ಇದರಿಂದ ತೊಂದರೆಗೆ ಸಿಲುಕಲಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ, ವಲಸೆಯೇತರ ವೀಸಾ ಆಗಿರುವ ‘ಎಚ್‌–1ಬಿ’ ನೀಡಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಬಿಗಿಗೊಳಿಸುವ ಸಾಧ್ಯತೆಯಿದೆ. ಇದು ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳ ವೆಚ್ಚ ಮತ್ತು ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಕ್ಕೆ ಭಾರತದಿಂದ ಶೇ 80ರಷ್ಟು ಐ.ಟಿ ರಫ್ತು ಮಾಡಲಾಗುತ್ತದೆ. ವೀಸಾ ನೀತಿ ಪರಿಷ್ಕರಿಸಿದರೆ ಈ ವಲಯವು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.