ADVERTISEMENT

ವಿದೇಶಿ ಹೂಡಿಕೆಯ ಹೊರಹರಿವು: ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ರೂಪಾಯಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2023, 16:12 IST
Last Updated 7 ಸೆಪ್ಟೆಂಬರ್ 2023, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಮೆರಿಕದ ಡಾಲರ್ ಎದುರು ಸತತ ನಾಲ್ಕನೆಯ ದಿನವೂ ಕುಸಿತ ದಾಖಲಿಸಿರುವ ರೂಪಾಯಿ ಮೌಲ್ಯವು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ವಹಿವಾಟಿನ ಅಂತ್ಯಕ್ಕೆ ₹83.23ಕ್ಕೆ ತಲುಪಿದೆ. ಇದು ಅಮೆರಿಕದ ಡಾಲರ್ ಎದುರು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ.

ಅಮೆರಿಕದ ಡಾಲರ್‌ ಮೌಲ್ಯವರ್ಧನೆ ಹಾಗೂ ಭಾರತದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳದ ಹೊರಹರಿವು ರೂ‍ಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾದವು. ಇವಲ್ಲದೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಾಗುತ್ತಿರುವುದು ಕೂಡ ರೂಪಾಯಿಯ ಕುಸಿತಕ್ಕೆ ಕಾರಣವಾಯಿತು ಎಂದು ವರ್ತಕರು ತಿಳಿಸಿದ್ದಾರೆ.

‘ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ₹83.05ರಿಂದ ₹83.40ರ ನಡುವೆ ಇರುವ ಅಂದಾಜು ಮಾಡಲಾಗಿದೆ’ ಎಂದು ಮೋತಿಲಾಲ್ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ವಿದೇಶಿ ವಿನಿಮಯ ವಿಶ್ಲೇಷಕ ಗೌರಂಗ್ ಸೋಮಯ್ಯ ಹೇಳಿದ್ದಾರೆ.

ADVERTISEMENT

ಕಚ್ಚಾ ತೈಲ ಉತ್ಪಾದನೆ ಮಾಡುವ ದೇಶಗಳು ಉತ್ಪಾದನೆ ಕಡಿತವನ್ನು ಡಿಸೆಂಬರ್‌ವರೆಗೆ ಮುಂದುವರಿಸುವ ತೀರ್ಮಾನ ಕೈಗೊಂಡ ನಂತರದಲ್ಲಿ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 90 ಡಾಲರ್‌ ಗಡಿ ದಾಟಿದೆ. ಇತ್ತ ಡಾಲರ್‌ಗೆ ಬೇಡಿಕೆ ಹೆಚ್ಚಾಗಿದೆ.

ಸೋಮವಾರದಿಂದ ಇದುವರೆಗೆ ರೂಪಾಯಿ ಮೌಲ್ಯವು 60 ಪೈಸೆಯಷ್ಟು ಕುಸಿದಿದೆ. ಮಂಗಳವಾರ ಒಂದೇ ದಿನದಲ್ಲಿ ರೂಪಾಯಿ ಮೌಲ್ಯವು 33 ಪೈಸೆಯಷ್ಟು ಕುಸಿದಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರದ ವಹಿವಾಟಿನದಲ್ಲಿ ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಒಟ್ಟು ನಿವ್ವಳ ₹758.55 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.