ಮುಂಬೈ: ಅಮೆರಿಕದ ಡಾಲರ್ ಎದುರು ಗುರುವಾರ ರೂಪಾಯಿ ಮೌಲ್ಯವು 17 ಪೈಸೆ ಕುಸಿದಿದ್ದು, ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.61ಕ್ಕೆ ತಲುಪಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾಗಿದೆ. ಇದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ. ದೇಶೀಯ ಷೇರುಪೇಟೆಗಳು ಏರಿಕೆ ದಾಖಲಿಸಿದರೂ ರೂಪಾಯಿಯು ಚೇತರಿಕೆ ಕಾಣಲಿಲ್ಲ.
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆದರೂ ರೂಪಾಯಿ ಮೌಲ್ಯ ಕುಸಿತ ತಡೆಯಲು ನೆರವಾಗಲಿಲ್ಲ ಎಂದು ವರ್ತಕರು ತಿಳಿಸಿದ್ದಾರೆ.
ಷೇರುಪೇಟೆ ದಾಖಲೆ:
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರುಗಳ ಖರೀದಿಯಿಂದಾಗಿ ಷೇರು ಸೂಚ್ಯಂಕಗಳು ಹೊಸ ಎತ್ತರಕ್ಕೆ ಜಿಗಿದಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 141 ಅಂಶ ಏರಿಕೆ ಕಂಡು, 77,478 ಅಂಶಕ್ಕೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 51 ಅಂಶ ಏರಿಕೆ ಕಂಡು, 23,567 ಅಂಶಗಳಲ್ಲಿ ಸ್ಥಿರಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.