ಮುಂಬೈ: ಅಮೆರಿಕದ ಡಾಲರ್ ಎದುರು ಮಂಗಳವಾರ ರೂಪಾಯಿ ಮೌಲ್ಯವು 45 ಪೈಸೆಯಷ್ಟು ಕುಸಿದಿದ್ದು, ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಅಂತ್ಯಕ್ಕೆ ₹83.59ಕ್ಕೆ ತಲುಪಿದೆ.
ದೇಶದ ಮಾರುಕಟ್ಟೆಗಳಲ್ಲಿ ಕಂಡುಬಂದ ಷೇರುಗಳ ಮಾರಾಟ ಹೆಚ್ಚಳ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿದೇಶಿ ಕರೆನ್ಸಿಗಳು ಮೌಲ್ಯವರ್ಧನೆಗೊಂಡಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.
ಸೋಮವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ₹83.14ಕ್ಕೆ ತಲುಪಿತ್ತು.
‘ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ನಿರೀಕ್ಷಿತ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಹಾಗಾಗಿ, ದೇಶದ ಷೇರುಪೇಟೆಗಳು ಕುಸಿತ ಕಂಡಿವೆ. ಭಾರತದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿದ್ದರಿಂದ ರೂಪಾಯಿ ಮೌಲ್ಯ ಕುಸಿದಿದೆ. ಸೋಮವಾರದ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಅಮೆರಿಕದ ಡಾಲರ್ ಚೇತರಿಕೆ ಕಂಡಿದೆ’ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಾದ ಪಿಎನ್‌ಪಿ ಪರಿಬಾಸ್‌ನ ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.