ADVERTISEMENT

ಅಮೆರಿಕ ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ: ಪರಿಣಾಮವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2022, 12:30 IST
Last Updated 23 ಸೆಪ್ಟೆಂಬರ್ 2022, 12:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ರೂಪಾಯಿ ಮೌಲ್ಯ ಶುಕ್ರವಾರದ ಆರಂಭಿಕ ವಹಿವಾಟಿನಲ್ಲೇ ಅಮೆರಿಕ ಡಾಲರ್ ಎದುರು 81.2250ಕ್ಕೆ ಇಳಿದಿತ್ತು. ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿರುವುದು ಹೂಡಿಕೆದಾರರಲ್ಲಿ ಆತಂಕ್ಕೆ ಕಾರಣವಾಗಿದೆ. ಸಾಮಾನ್ಯ ಜನರ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಜನ ಸಾಮಾನ್ಯರ ಮೇಲೆ ಪರಿಣಾಮವೇನು?

ರೂಪಾಯಿ ಮೌಲ್ಯ ಕುಸಿದಿರುವುದರ ನೇರ ಪರಿಣಾಮವೆಂದರೆ ಹಣದುಬ್ಬರ. ರೂಪಾಯಿ ಮೌಲ್ಯ ಕುಸಿತದಿಂದ ಆಮದು ದುಬಾರಿಯಾಗಲಿದೆ. ಕಡಿಮೆ ದರಕ್ಕೆ ಆಮದಾಗುತ್ತಿದ್ದ ವಸ್ತುಗಳಿಗೆ ಇನ್ನು ಮುಂದೆ ಹೆಚ್ಚು ಮೊತ್ತ ನೀಡಬೇಕಾಗಲಿದೆ. ಪರಿಣಾಮವಾಗಿ ಗ್ರಾಹಕರು ಹೆಚ್ಚು ಬೆಲೆ ತೆತ್ತು ವಸ್ತುಗಳನ್ನು ಖರೀದಿಸಬೇಕಾಗಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಭಾರತವು ಶೇ 80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಅನೇಕ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಬಹುದು. ಖಾದ್ಯ ತೈಲ, ರಸಗೊಬ್ಬರಗಳ ವಿಚಾರದಲ್ಲಿಯೂ ಭಾರತವು ಆಮದನ್ನು ಅವಲಂಬಿಸಿದೆ. ಇದು ಹಣದುಬ್ಬರ ಒತ್ತಡವನ್ನು ಹೆಚ್ಚಿಸಲಿದೆ. ಎಲೆಕ್ಟ್ರಾನಿಕ್ ವಸ್ತುಗಳ ಅತಿದೊಡ್ಡ ಆಮದುದಾರ ದೇಶವಾಗಿದೆ ಭಾರತ. ಹಬ್ಬದ ಸೀಸನ್ ಕೂಡ ಆಗಿರುವುದರಿಂದ ಗ್ರಾಹಕರ ಜೇಬಿಗೆ ಹೆಚ್ಚಿನ ಹೊರೆಯಾಗುವ ಆತಂಕ ಇದೀಗ ಎದುರಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ರಫ್ತನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ರೂಪಾಯಿ ಮೌಲ್ಯ ಕುಸಿತ ನೆರವಾಗಬಹುದು. ಆದರೆ, ಇದೂ ಸಹ ಭಾರತದ ಪಾಲಿಗೆ ಒಳ್ಳೆಯ ಬೆಳವಣಿಗೆ ಎನ್ನಲಾಗದು. ಯಾಕೆಂದರೆ ಭಾರತದಿಂದ ರಫ್ತಾಗುವ ರತ್ನಗಳು, ಆಭರಣಗಳು, ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲು ಬೇಕಾಗುವ ಹೆಚ್ಚಿನ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಆದಾಗ್ಯೂ, ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಔಷಧೀಯ ವಲಯಗಳಿಗೆ ರೂಪಾಯಿ ಮೌಲ್ಯ ಕುಸಿತವು ನೆರವಾಗಬಹುದು. ಈ ಉದ್ಯಮ ವಲಯಗಳ ಅರ್ಧಕ್ಕಿಂತಲೂ ಹೆಚ್ಚಿನ ಆದಾಯ ಅಮೆರಿಕದಿಂದಲೇ ಬರುತ್ತಿದೆ ಎನ್ನಲಾಗಿದೆ.

ದುಬಾರಿಯಾಗಬಹುದು ವಿದೇಶ ಪ್ರವಾಸ

ರಜೆಯಲ್ಲಿ ವಿದೇಶ ಪ್ರವಾಸ ಹಮ್ಮಿಕೊಳ್ಳುವ ಯೋಜನೆಯಲ್ಲಿದ್ದವರ ಜೇಬಿಗೆ ರೂಪಾಯಿ ಮೌಲ್ಯ ಕುಸಿತದಿಂದ ಹೆಚ್ಚಿನ ಕತ್ತರಿ ಬೀಳಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ವೆಚ್ಚವೂ ಹೆಚ್ಚಾಗಬಹುದು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.