ಮಾಸ್ಕೊ: ಸೆಪ್ಟೆಂಬರ್ 9ರ ವರೆಗೂ ವಿದೇಶಿ ಕರೆನ್ಸಿಗಳ ವಿನಿಮಯ ಮಾರಾಟವನ್ನು ರಷ್ಯಾ ನಿಷೇಧಿಸಿದೆ. ಉಕ್ರೇನ್ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ರಷ್ಯಾ ಹಲವು ರಾಷ್ಟ್ರಗಳಿಂದ ಆರ್ಥಿಕ ನಿರ್ಬಂಧ ಎದುರಿಸುತ್ತಿದ್ದು, ಈ ನಡುವೆ ಕೇಂದ್ರ ಬ್ಯಾಂಕ್ ಬುಧವಾರ ಪ್ರಕಟಣೆ ಹೊರಡಿಸಿದೆ.
'ಮಾರ್ಚ್ 9ರಿಂದ ಸೆಪ್ಟೆಂಬರ್ 9ರ ವರೆಗೂ ಬ್ಯಾಂಕ್‌ಗಳು ಜನರಿಗೆ ವಿದೇಶಿ ಕರೆನ್ಸಿಗಳ ವಿನಿಮಯ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೆ, ರಷ್ಯಾದ ಪ್ರಜೆಗಳು ವಿದೇಶಿ ಕರೆನ್ಸಿಗಳನ್ನು ಸ್ಥಳೀಯ ರೂಬಲ್ ಕರೆನ್ಸಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ನಾಗರಿಕರು ಯಾವುದೇ ಸಮಯದಲ್ಲಿ ಎಷ್ಟೇ ಮೊತ್ತದ ವಿದೇಶಿ ಕರೆನ್ಸಿಗಳನ್ನು ರೂಬಲ್‌ಗಳಿಗೆ ಬದಲಿಸಿಕೊಳ್ಳಬಹುದು. ಸೆಪ್ಟೆಂಬರ್ 9ರ ವರೆಗೂ ವಿದೇಶಿ ಕರೆನ್ಸಿ ಒಳಗೊಂಡಿರುವ ಖಾತೆಗಳಿಂದ ಹಣ ಹಿಂಪಡೆಯುವುದಕ್ಕೆ ರಷ್ಯಾದ ಬ್ಯಾಂಕ್‌ಗಳಲ್ಲಿ 10,000 ಡಾಲರ್‌ಗಳ ಮಿತಿ ವಿಧಿಸಲಾಗಿದೆ. ಯಾವುದೇ ದೇಶದ ಕರೆನ್ಸಿಯ ಖಾತೆ ಹೊಂದಿದ್ದರೂ ಕೇವಲ ಡಾಲರ್ ರೂಪದಲ್ಲಿ ಮಾತ್ರ ಕರೆನ್ಸಿ ಹಿಂಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ–ಉಕ್ರೇನ್ನಲ್ಲಿ ಇಂದು ಕದನ ವಿರಾಮ ಘೋಷಿಸಿದ ರಷ್ಯಾ
ನಿಗದಿತ ಮೊತ್ತದ ವಿದೇಶಿ ಕರೆನ್ಸಿಗಳನ್ನು ವಿತರಿಸಲು ಬ್ಯಾಂಕ್‌ಗಳಿಗೆ ಕೆಲವು ದಿನಗಳು ಬೇಕಾಗಬಹುದು. ರಷ್ಯಾದ ಕೇಂದ್ರ ಬ್ಯಾಂಕ್ ಹಾಗೂ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕ ನಿರ್ಬಂಧಗಳನ್ನು ಹೇರಿರುವ ಬೆನ್ನಲ್ಲೇ ವಿದೇಶಿ ಕರೆನ್ಸಿಗಳ ಎದುರು ರಷ್ಯಾದ ರೂಬಲ್ ಮೌಲ್ಯ ತೀವ್ರ ಕುಸಿತಕ್ಕೆ ಒಳಗಾಗಿದೆ.
ರಷ್ಯಾದಿಂದ ತೈಲ ಮತ್ತು ಅನಿಲ ಆಮದಿನ ಮೇಲೆ ನಿಷೇಧ ಹೇರಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಂಗಳವಾರ ಅಧಿಕೃತ ಪ್ರಕಟನೆ ಹೊರಡಿಸಿದ್ದಾರೆ. ಅದರಿಂದಾಗಿ ರಷ್ಯಾದ ಆರ್ಥಿಕತೆಯ ಮೇಲೆ ತೀವ್ರ ಪೆಟ್ಟು ಬಿದ್ದಂತಾಗಿದೆ.
ರೂಬಲ್ ಕರೆನ್ಸಿಯ ಮೌಲ್ಯ:
* 1 ಅಮೆರಿಕನ್ ಡಾಲರ್= 130 ರಷ್ಯಾದ ರೂಬಲ್
* ಭಾರತದ 1 ರೂಪಾಯಿ= 1.69 ರಷ್ಯಾದ ರೂಬಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.