ADVERTISEMENT

ನವೋದ್ಯಮಗಳಿಗೆ ಅಲ್ಪಾವಧಿಗೆ ತೊಂದರೆ

ಎಸ್‌ವಿಬಿ ಬ್ಯಾಂಕ್‌ ದಿವಾಳಿಯ ಪರಿಣಾಮಗಳ ಕುರಿತು ತಜ್ಞರ ಅನಿಸಿಕೆ

ಪಿಟಿಐ
Published 13 ಮಾರ್ಚ್ 2023, 0:12 IST
Last Updated 13 ಮಾರ್ಚ್ 2023, 0:12 IST

ನವದೆಹಲಿ: ನವೋದ್ಯಮಗಳ ಹುಟ್ಟು ಮತ್ತು ಬೆಳವಣಿಗೆಗೆ ನೆರವು ನೀಡುವ ‘ವೈ ಕಾಂಬಿನೇಟರ್’ ಜೊತೆ ನಂಟು ಹೊಂದಿರುವ ಭಾರತದ ನವೋದ್ಯಮಗಳು ಮತ್ತು ತಂತ್ರಾಂಶಗಳನ್ನು ಒಂದು ಸೇವೆಯನ್ನಾಗಿ ಒದಗಿಸುವ (ಎಸ್‌ಎಎಎಸ್‌) ಹಾಗೂ ಅಮೆರಿಕದಲ್ಲಿ ಅಸ್ತಿತ್ವ ಹೊಂದಿರುವ ಭಾರತದ ನವೋದ್ಯಮಗಳು ಎಸ್‌ವಿಬಿ ಬ್ಯಾಂಕ್‌ ದಿವಾಳಿಯ ಪರಿಣಾಮಗಳನ್ನು ಹೆಚ್ಚು ಅನುಭವಿಸಲಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಬ್ಯಾಂಕ್‌ ದಿವಾಳಿಯ ಪರಿಣಾಮವು ಹೆಚ್ಚು ದಿನ ಇರಲಿಕ್ಕಿಲ್ಲ ಎಂದು ಅವರು ಅಂದಾಜಿಸಿದ್ದಾರೆ.

ವೈ ಕಾಂಬಿನೇಟರ್‌ನ ಬೆಂಬಲ ಪಡೆದಿರುವ ನವೋದ್ಯಮಗಳಿಗೆ ಪಾವತಿಗಳು ಅವು ಎಸ್‌ವಿಬಿ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಯ ಮೂಲಕ ಆಗುತ್ತವೆ. ಆದರೆ, ಮೀಶೊ ಹಾಗೂ ರೇಜರ್‌ಪೇನಂತಹ ಕೆಲವು ಕಂಪನಿಗಳು ತಮ್ಮ ಹಣವನ್ನು ಸಕಾಲದಲ್ಲಿ ಈ ಬ್ಯಾಂಕ್‌ನಿಂದ ಹೊರತೆಗೆದಿದ್ದವು.

ವೈ ಕಾಂಬಿನೇಟರ್‌ನಿಂದ ನೆರವು ಪಡೆದಿರುವ ನವೋದ್ಯಮಗಳಾದ ಖಾತಾಬುಕ್, ಜೆಪ್ಟೊ ಮತ್ತು ಒಕೆಕ್ರೆಡಿಟ್ ಕಂಪನಿಗಳು ಪ್ರತಿಕ್ರಿಯೆ ನೀಡಿಲ್ಲ. ‘ವೈ ಕಾಂಬಿನೇಟರ್ ಜೊತೆ ನಂಟು ಹೊಂದಿಲ್ಲದೆ ಇದ್ದರೂ, ತಂತ್ರಾಂಶವನ್ನು ಒಂದು ಸೇವೆಯನ್ನಾಗಿ ಒದಗಿಸುವ ಕೆಲವು ಕಂಪನಿಗಳು ಎಸ್‌ವಿಬಿ ಬ್ಯಾಂಕ್‌ನಲ್ಲಿ ಗಣನೀಯ ಪ್ರಮಾಣದಲ್ಲಿ ಹಣ ಹೊಂದಿದ್ದವು’ ಎಂದು ಹಣಕಾಸು ತಂತ್ರಜ್ಞಾನ ಸಂಸ್ಥೆ ರೆಕರ್‌ ಕ್ಲಬ್‌ನ ಸಿಇಒ ಏಕಲವ್ಯ ಗುಪ್ತ ತಿಳಿಸಿದ್ದಾರೆ.

ADVERTISEMENT

‘ಎಸ್‌ವಿಬಿ ದಿವಾಳಿ ಆಗಿರುವುದು ನವೋದ್ಯಮಗಳಿಗೆ ಸಿಗುವ ಬಂಡವಾಳದ ಮೇಲೆ ಅಲ್ಪಾವಧಿಯಲ್ಲಿ ಪರಿಣಾಮ ಬೀರಲಿದೆ. ಹೊಸದಾಗಿ ಹೂಡಿಕೆ ಮಾಡುವುದು ಅಲ್ಪಕಾಲ ಸ್ಥಗಿತವಾಗಲಿದೆ. ಏಕೆಂದರೆ ವೆಂಚರ್‌ ಕ್ಯಾಪಿಟಲಿಸ್ಟ್‌ಗಳು ಈಗ ತಮ್ಮ ಇತರ ಹೂಡಿಕೆಗಳನ್ನು ಉಳಿಸಿಕೊಳ್ಳಲು ಮುಂದಾಗುತ್ತಾರೆ. ಆದರೆ ಬಂಡವಾಳದ ಸಮಸ್ಯೆಯು ಹೆಚ್ಚು ದಿನ ಮುಂದುವರಿಯಲಿಕ್ಕಿಲ್ಲ’ ಎಂದು ಇನ್‌ಮೊಬಿ ಗ್ರೂಪ್‌ನ ಸಹ ಸಂಸ್ಥಾಪಕ ಅಭಯ್ ಸಿಂಘಲ್ ಹೇಳಿದ್ದಾರೆ.

‘ಎಸ್‌ವಿಬಿ ಜೊತೆ ವಹಿವಾಟು ಹೊಂದಿರುವ ಭಾರತದ ಬಹುತೇಕ ನವೋದ್ಯಮಗಳು ಆರಂಭಿಕ ಹಂತದವು. ಅವು ಅಲ್ಲಿ ಇರಿಸಿರುವ ಹಣವು 2.50 ಲಕ್ಷ ಡಾಲರ್‌ಗಿಂತ (₹ 2.04 ಕೋಟಿ) ಹೆಚ್ಚಿಲ್ಲ. ಈ ಮೊತ್ತಕ್ಕೆ ವಿಮೆ ಇರುತ್ತದೆ’ ಎಂದು ಉದ್ಯಮದ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.