ADVERTISEMENT

ಸ್ಯಾಮ್ಸಂಗ್‌ ನೌಕರರ ಹೋರಾಟ: ಕೆಲಸದಿಂದ ವಜಾಗೊಳಿಸುವ ಎಚ್ಚರಿಕೆ ನೀಡಿದ ಕಂಪನಿ

ಪಿಟಿಐ
Published 21 ಸೆಪ್ಟೆಂಬರ್ 2024, 14:33 IST
Last Updated 21 ಸೆಪ್ಟೆಂಬರ್ 2024, 14:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ತಕ್ಷಣ‌ವೇ ಕೆಲಸಕ್ಕೆ ಹಾಜರಾದರೆ ಕ್ರಮ ಜರುಗಿಸುವುದಿಲ್ಲ. ಹೋರಾಟ ಮುಂದುವರಿಸಿದರೆ ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಶ್ರೀಪೆರಂಬದೂರು ಘಟಕದಲ್ಲಿ ಪ್ರತಿಭಟನನಿರತ ಉದ್ಯೋಗಿಗಳಿಗೆ ಸ್ಯಾಮ್ಸಂಗ್‌ ಕಂಪನಿಯು ಷೋಕಾಸ್‌ ನೋಟಿಸ್‌ ನೀಡಿದೆ.

ನೋಟಿಸ್‌ಗೆ ಸೆಪ್ಟೆಂಬರ್‌ 23ರೊಳಗೆ ಸೂಕ್ತ ಉತ್ತರ ನೀಡಬೇಕು ಎಂದು ಸೂಚಿಸಿದೆ.

ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್‌ 9ರಿಂದ ಸಿಐಟಿಯು ಬೆಂಬಲಿತ ಸ್ಯಾಮ್ಸಂಗ್‌ ಇಂಡಿಯಾ ವರ್ಕರ್ಸ್‌ ಯೂನಿಯನ್‌ ನೇತೃತ್ವದಡಿ ಒಂದು ಸಾವಿರಕ್ಕೂ ಹೆಚ್ಚು ನೌಕರರು ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಘಟಕದ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.

ADVERTISEMENT

ಪ್ರತಿಭಟನೆ ನಡೆಸುವುದು ಕಾನೂನುಬಾಹಿರ. ಸಂಧಾನದ ಮೂಲಕ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಬದ್ಧ ಎಂದು ಕಂಪನಿ ತಿಳಿಸಿದೆ. 

‘ಕೆಲಸವೂ ಇಲ್ಲ; ಸಂಬಳವೂ ಇಲ್ಲ’ ಎಂಬ ನೀತಿ ಅನುಸರಿಸಲಾಗುವುದು. ಹೋರಾಟ ನಡೆಸಿದ ದಿನಗಳಿಗೆ ಅನ್ವಯಿಸುವಂತೆ ಸಂಬಳ ನೀಡುವುದಿಲ್ಲ ಎಂದು ಹೇಳಿದೆ.

ಕಳೆದ 16 ವರ್ಷದಿಂದ ಗೃಹೋಪಯೋಗಿ ಉಪಕರಣಗಳನ್ನು ತಯಾರಿಸುತ್ತಿರುವ ಈ ಘಟಕದಲ್ಲಿ 1,800ಕ್ಕೂ ಹೆಚ್ಚು ನೌಕರರು ಇದ್ದಾರೆ.

‘ನೌಕರರ ಬೇಡಿಕೆಗಳಿಗೆ ಕಂಪನಿಯು ಸ್ಪಂದಿಸಲಿಲ್ಲ. ತಮಿಳುನಾಡು ಸರ್ಕಾರ ಕೂಡ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲು ವಿಳಂಬ ಮಾಡಿತು. ಹಾಗಾಗಿ, ನಾವು  ಕಾನೂನಾತ್ಮಕವಾಗಿ ಹೋರಾಟದ ಹಾದಿ ತುಳಿದಿದ್ದೇವೆ. ಆಡಳಿತ ಮಂಡಳಿಯು ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ’ ಎಂದು ಶ್ರೀಪೆರಂಬದೂರು ಜಿಲ್ಲಾ ಸಿಐಟಿಯು ಘಟಕದ ಕಾರ್ಯದರ್ಶಿ ಇ. ಮುತ್ತುಕುಮಾರ್‌ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.