ನವದೆಹಲಿ: ಶೂನ್ಯ ಬ್ಯಾಲೆನ್ಸ್ ಖಾತೆ ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆಗಳನ್ನು (ಬಿಎಸ್‌ಬಿಡಿಎ) ಹೊಂದಿರುವ ಬಡ ವರ್ಗದ ಜನರು ಪಡೆಯುವ ಕೆಲವು ಸೇವೆಗಳ ಮೇಲೆ ಎಸ್‌ಬಿಐ ಒಳಗೊಂಡಂತೆ ಹಲವು ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ ಎಂದು ಐಐಟಿ–ಬಾಂಬೆ ನಡೆಸಿರುವ ಅಧ್ಯಯನವು ಹೇಳಿದೆ.
ಎಸ್‌ಬಿಐನಲ್ಲಿ ಬಿಎಸ್‌ಬಿಡಿ ಖಾತೆ ಹೊಂದಿರುವವರು ಶುಲ್ಕರಹಿತವಾಗಿ ತಿಂಗಳಿಗೆ ನಾಲ್ಕು ಬಾರಿ ಮಾತ್ರವೇ ಡೆಬಿಟ್ ಕಾರ್ಡ್ ಬಳಸಬಹುದು. ನಂತರ ಪ್ರತಿ ಬಾರಿಗೆ ₹ 17.70 ಶುಲ್ಕ ವಿಧಿಸಲಾಗುತ್ತಿದೆ. ಈ ನಿರ್ಧಾರ ನ್ಯಾಯೋಚಿತ ಎಂದು ಪರಿಗಣಿಸಲು ಆಗವುದಿಲ್ಲ ಎಂದು ಅಧ್ಯಯನವು ಕಂಡುಕೊಂಡಿದೆ. 2015–20ರ ನಡುವಿನ ಅವಧಿಯಲ್ಲಿ ಎಸ್‌ಬಿಐ ಅಂದಾಜು 12 ಕೋಟಿ ಬಿಎಸ್‌ಬಿಡಿ ಖಾತೆಗಳಿಗೆ ಸೇವಾ ಶುಲ್ಕಗಳನ್ನು ವಿಧಿಸುವ ಮೂಲಕ ಒಟ್ಟಾರೆ ₹ 300 ಕೋಟಿ ಸಂಗ್ರಹಿಸಿದೆ ಎಂದು ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ 3.9 ಕೋಟಿ ಬಿಎಸ್‌ಬಿಡಿ ಖಾತೆಗಳಿಂದ ಸೇವಾ ಶುಲ್ಕದ ರೂಪದಲ್ಲಿ ₹ 9.9 ಕೋಟಿ ಸಂಗ್ರಹಿಸಿದೆ.
‘ಬಿಎಸ್‌ಬಿಡಿಎಗೆ ಸಂಬಂಧಿಸಿದಂತೆ ಕೆಲವು ಬ್ಯಾಂಕ್‌ಗಳು ಆರ್‌ಬಿಐನ ನಿಯಮಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸಿವೆ. ಮುಖ್ಯವಾಗಿ ಅತಿ ಹೆಚ್ಚಿನ ಸಂಖ್ಯೆಯ ಬಿಎಸ್‌ಬಿಡಿ ಖಾತೆಗಳನ್ನು ಹೊಂದಿರುವ ಎಸ್‌ಬಿಐ ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚಿನ ಬಾರಿ ಡೆಬಿಟ್ ಕಾರ್ಡ್ ಬಳಸಿದರೆ ಪ್ರತಿ ಹೆಚ್ಚುವರಿ ಬಳಕೆಗೆ ₹ 17.70 ಶುಲ್ಕ ವಿಧಿಸುತ್ತಿದೆ. ಇದರ ಮೂಲಕ 2018–19ರಲ್ಲಿ ₹ 72 ಕೋಟಿ ಸಂಗ್ರಹವಾಗಿದ್ದರೆ 2019–20ರಲ್ಲಿ ₹ 158 ಕೋಟಿ ಸಂಗ್ರಹವಾಗಿದೆ’ ಎಂದು ಐಐಟಿ–ಬಾಂಬೆ ಪ್ರೊಫೆಸರ್ ಆಶಿಶ್ ದಾಸ್ ನಡೆಸಿರುವ ಅಧ್ಯಯನವು ತಿಳಿಸಿದೆ.
ಇಂತಹ ಖಾತೆಗಳಿಗೆ ಶುಲ್ಕ ವಿಧಿಸುವ ಸಂಬಂಧ ಆರ್‌ಬಿಐ 2013ರ ಸೆಪ್ಟೆಂಬರ್‌ನಲ್ಲಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕೆಲವು ಸೂಚನೆಗಳು ಇವೆ. ಅದರಂತೆ, ಖಾತೆ ಹೊಂದಿರುವವರು ಒಂದು ತಿಂಗಳಿನಲ್ಲಿ ನಾಲ್ಕಕ್ಕಿಂತ ಹೆಚ್ಚು ಬಾರಿ ಹಣ ಪಡೆಯಲು ಅವಕಾಶ ನೀಡಲಾಗಿದೆ. ಬ್ಯಾಂಕ್‌ಗಳು ಅದಕ್ಕೆ ಶುಲ್ಕ ವಿಧಿಸುವುದಿಲ್ಲ.
ಎನ್‌ಇಎಫ್‌ಟಿ, ಐಎಂಪಿಎಸ್, ಯುಪಿಐ, ಭೀಮ್–ಯುಪಿಐ ಮತ್ತು ಡೆಬಿಟ್ ಕಾರ್ಡ್‌ನಂತಹ ಡಿಜಿಟಲ್ ವಹಿವಾಟಿಗೂ ಎಸ್‌ಬಿಐ ಗರಿಷ್ಠ ಮಟ್ಟದ ಸೇವಾ ಶುಲ್ಕ ವಿಧಿಸುತ್ತಿದೆ.
ಒಂದೆಡೆ ದೇಶದಲ್ಲಿ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲಾಗುತ್ತಿದ್ದರೆ ಇತ್ತ ಎಸ್‌ಬಿಐ ಗರಿಷ್ಠ ಶುಲ್ಕ ವಿಧಿಸುತ್ತಿದೆ ಎಂದು ಅಧ್ಯಯನವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.