ಮುಂಬೈ: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬ್ಯಾಂಕ್‌ನ ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರವನ್ನು (ಎಂಸಿಎಲ್‌ಆರ್) ಶೇ 0.15ರಷ್ಟು ಕಡಿಮೆ ಮಾಡಿರುವುದಾಗಿ ಬುಧವಾರ ಹೇಳಿದೆ.
ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಶೇ 0.10ರಷ್ಟು ಕಡಿತಗೊಳಿಸಲಾಗಿದ್ದು, ಬಡ್ಡಿ ದರ ಶೇ 7.85ರಿಂದ ಶೇ 7.75ಕ್ಕೆ ಇಳಿಕೆಯಾಗಿದೆ. ಮಾರ್ಚ್ 10ರಿಂದಲೇ ಹೊಸ ಬಡ್ಡಿ ದರ ಅನ್ವಯವಾಗಲಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಬಿಐ ಸತತ 10ನೇ ಸಲ ಎಂಸಿಎಲ್‌ಆರ್ ಕಡಿತಗೊಳಿಸಿದೆ. ಇದರಿಂದ ಪ್ರತಿ ತಿಂಗಳು ಸಮಾನ ಕಂತಿನ (ಇಎಂಐ) ರೂಪದಲ್ಲಿ ಸಾಲ ಮರು ಪಾವತಿಸುವವರಿಗೆ ಪ್ರಯೋಜನವಾಗಲಿದೆ.
ಇದರೊಂದಿಗೆ ಬ್ಯಾಂಕ್ ಸ್ಥಿರ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿ ದರವನ್ನೂ ಇಳಿಸಿದೆ. ತಿಂಗಳ ಅಂತರದಲ್ಲಿ ಎರಡನೇ ಸಲ ಎಫ್‌ಡಿ ಮೇಲಿನ ಬಡ್ಡಿ ಇಳಿಕೆಯಾದಂತಾಗಿದೆ. ಅಲ್ಪಾವಧಿ, 45 ದಿನಗಳ ವರೆಗಿನ ಠೇವಣಿ ಮೇಲಿನ ಬಡ್ಡಿಯನ್ನು ಶೇ 0.50ರಷ್ಟು ಕಡಿಮೆ ಮಾಡಲಾಗಿದೆ. ಶೇ 4.5ರಷ್ಟಿದ್ದ ಅಲ್ಪಾವಧಿ ಬಡ್ಡಿ ದರ ಶೇ 4 ಆಗಿದೆ.
ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಠೇವಣಿ ಮೇಲಿನ ಬಡ್ಡಿ ದರ ಶೇ 0.10ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ಶೇ 6ರಷ್ಟಿದ್ದ ಬಡ್ಡಿ ದರ, ಶೇ 5.9ಕ್ಕೆ ಇಳಿಕೆಯಾಗಿದೆ.
ಒಂದು ತಿಂಗಳ ಎಂಸಿಎಲ್‌ಆರ್ ಶೇ 0.15 ಕಡಿತದೊಂದಿದೆ ಶೇ 7.45, ಮೂರು ತಿಂಗಳ ಎಂಸಿಎಲ್‌ಆರ್ ಶೇ 7.65ರಿಂದ ಶೇ 7.50 ಆಗಿದೆ. ಎರಡು ವರ್ಷ ಮತ್ತು ಮೂರು ವರ್ಷಗಳ ಎಂಸಿಎಲ್‌ಆರ್ ಶೇ 0.10 ಇಳಿಕೆಯೊಂದಿಗೆ ಕ್ರಮವಾಗಿ ಶೇ 7.95 ಮತ್ತು ಶೇ 8.05 ಆಗಿದೆ.
ಸೋಮವಾರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹ ಎಂಸಿಎಲ್‌ಆರ್ ಶೇ 0.10ರಷ್ಟು ಕಡಿತಗೊಳಿಸಿದೆ.
ಅವಧಿ | ಬಡ್ಡಿ ದರ (%) |
7 ದಿನಗಳಿಂದ 45 ದಿನ | 4.0 |
46 ದಿನಗಳಿಂದ 179 ದಿನ | 5.0 |
180 ದಿನಗಳಿಂದ ಒಂದು ವರ್ಷ | 5.5 |
1 ವರ್ಷದಿಂದ 10 ವರ್ಷ | 5.9 |
ಹಿರಿಯ ನಾಗರಿಕರಿಗೆ: 180 ದಿನಗಳಿಂದ 1ವರ್ಷ | 6.0 |
1 ವರ್ಷದಿಂದ 10 ವರ್ಷ | 6.4 |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.