ಮುಂಬೈ: ಭಾರತದಿಂದ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಸ್ವದೇಶಕ್ಕೆ ಗಡಿಪಾರು ಮಾಡಬೇಕೆಂಬ ಬ್ರಿಟನ್ ನ್ಯಾಯಾಲಯದ ಆದೇಶವು, ₹ 9 ಸಾವಿರ ಕೋಟಿ ಮೊತ್ತದ ಸಾಲ ವಸೂಲಾತಿ ಪ್ರಕ್ರಿಯೆ ತ್ವರಿತಗೊಳಿಸಲಿದೆ ಎಂದು ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿರೀಕ್ಷಿಸಿದೆ.
‘ಎಸ್‌ಬಿಐ’ ನೇತೃತ್ವದಲ್ಲಿನ ಹದಿಮೂರು ಬ್ಯಾಂಕ್‌ಗಳ ಒಕ್ಕೂಟವು, ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ₹ 9 ಸಾವಿರ ಕೋಟಿ ಸಾಲ ಮಂಜೂರು ಮಾಡಿದೆ.
‘ಕೋರ್ಟ್ ತೀರ್ಪು ನೀಡಿರುವ ಸಂದೇಶ ತುಂಬ ಸ್ಪಷ್ಟವಾಗಿದೆ. ಸಾಲ ಮರುಪಾವತಿಯಾಗುವ ಸಾಧ್ಯತೆ ಹೆಚ್ಚಿದೆ. ಸಾಲ ಮರುಪಾವತಿಸದೆ ದೇಶ ಬಿಟ್ಟು ಓಡಿ ಹೋಗಿ ತಲೆಮರೆಸಿಕೊಳ್ಳಲು ಇನ್ನು ಮುಂದೆ ಯಾರೊಬ್ಬರಿಗೂ ಸಾಧ್ಯವಿಲ್ಲ ಎನ್ನುವುದು ಈ ಗಡಿಪಾರು ಆದೇಶದಿಂದ ಸ್ಪಷ್ಟಗೊಳ್ಳುತ್ತದೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.
‘ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹ 13 ಸಾವಿರ ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರನ್ನೂ ಭಾರತಕ್ಕೆ ಕರೆತರುವ ಪ್ರಯತ್ನಗಳು ತ್ವರಿತಗೊಳ್ಳಲಿವೆ.
‘ಮಲ್ಯ ಅವರ ಗಡಿಪಾರು ಆದೇಶ, ಸಾಲ ನೀಡುವ ಸಂಸ್ಥೆಗಳು ಮತ್ತು ಸಾಲಗಾರರ ನಡುವಣ ಬಾಂಧವ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಆರ್ಥಿಕ ಚಟುವಟಿಕೆಗಳಲ್ಲಿ ಬಂಡವಾಳ ತೊಡಗಿಸಲು ಸಾಲ ನೀಡುವುದಕ್ಕೆ ತುಂಬ ಮಹತ್ವ ಇದೆ. ಹಣವನ್ನು ಯಾವ ಉದ್ದೇಶಕ್ಕೆ ಸಾಲದ ರೂಪದಲ್ಲಿ ನೀಡಲಾಗಿದೆ ಎನ್ನುವುದನ್ನು ಸಾಲ ಪಡೆದವರು ತಿಳಿದುಕೊಳ್ಳಬೇಕು. ಬ್ಯಾಂಕ್‌ಗಳೂ ಶುದ್ಧ ಸ್ವರೂಪದ ಬ್ಯಾಂಕಿಂಗ್ ವಹಿವಾಟು ನಡೆಸಬೇಕು ಎನ್ನುವುದನ್ನೂ ಈ ತೀರ್ಪು ಸ್ಪಷ್ಟಪಡಿಸಿದೆ’ ಎಂದು ಹೇಳಿದ್ದಾರೆ.
ತಾವು ಪಡೆದುಕೊಂಡಿರುವ ಸಾಲದ ಅಸಲನ್ನು ಪೂರ್ಣವಾಗಿ ಪಾವತಿಸುವುದಾಗಿ ಮಲ್ಯ ಅವರು ಹೇಳಿಕೊಂಡಿದ್ದರು. ‘ಸಾಲ ತೀರಿಸುವುದಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗೆ ಮಲ್ಯ ಅವರಿಂದ ಯಾವುದೇ ಬಗೆಯ ಔಪಚಾರಿಕ ಕೋರಿಕೆ ತಲುಪಿಲ್ಲ’ ಎಂದು ರಜನೀಶ್ ಹೇಳಿದ್ದಾರೆ. ಉರ್ಜಿತ್ ಪಟೇಲ್ ಅವರ ರಾಜೀನಾಮೆ ಕುರಿತು ಕೇಳಿದ ಪ್ರತಿಕ್ರಿಯೆಗೆ, ‘ಈ ಒಂದು ಪ್ರಶ್ನೆಗೆ ನಾನು ಉತ್ತರಿಸಲಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.