ಬೆಂಗಳೂರು: ನವೋದ್ಯಮಗಳಿಗೆ ಸಾಲ ಸೇರಿದಂತೆ ಹಣಕಾಸಿನ ವಿವಧ ಸೇವೆಗಳನ್ನು ಒದಗಿಸುವ ಉದ್ದೇಶದಿಂದಲೇ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇದೇ ಮೊದಲ ಬಾರಿಗೆ ಬೆಂಗಳೂರಿನ ಕೋರಮಂಗಲದಲ್ಲಿ ಪ್ರತ್ಯೇಕ ಶಾಖೆಯೊಂದನ್ನು ಆರಂಭಿಸಿದೆ.
ಸಾಲ, ಠೇವಣಿ, ಹಣ ರವಾನೆ, ವಿದೇಶಿ ವಿನಿಮಯ, ವಿಮೆ, ಬಂಡವಾಳ ಮಾರುಕಟ್ಟೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಲಹೆಗಳು ಸೇರಿದಂತೆ ನವೋದ್ಯಮಗಳಿಗೆ ಹಣಕಾಸಿನ ಹಲವು ಸೇವೆಗಳನ್ನು ಈ ಶಾಖೆ ಒದಗಿಸಲಿದೆ.
‘ಎಸ್‌ಬಿಐ ಕಡೆಯಿಂದ ದೇಶದಲ್ಲಿ ಒಟ್ಟು 104 ನವೋದ್ಯಮಗಳಿಗೆ ಈಗಾಗಲೇ ಸಾಲ ಕೊಡಲಾಗಿದೆ. ಹೀಗೆ ನೀಡಿರುವ ಸಾಲದ ಒಟ್ಟು ಮೊತ್ತ ಅಂದಾಜು ₹ 250 ಕೋಟಿ. ಬಹಳ ಜವಾಬ್ದಾರಿಯುತ ಮರುಪಾವತಿ ಇಲ್ಲಿ ಕಾಣುತ್ತಿದೆ’ ಎಂದು ಎಸ್‌ಬಿಐ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು ನವೋದ್ಯಮಗಳಿಗೆ ರಾಜಧಾನಿ. ಹೀಗಾಗಿ ಇಲ್ಲಿ ಮೊದಲ ಶಾಖೆಯನ್ನು ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುರುಗ್ರಾಮ ಮತ್ತು ಹೈದರಾಬಾದ್‌ನಲ್ಲಿಯೂ ಇಂತಹ ಶಾಖೆ ಆರಂಭಿಸುವ ಆಲೋಚನೆ ಇರುವುದಾಗಿ ಅವರು ಹೇಳಿದರು.
ನವೋದ್ಯಮಗಳಲ್ಲಿ ಈಕ್ವಿಟಿ ರೂಪದಲ್ಲಿ ಬಂಡವಾಳ ಒದಗಿಸುವ ವಿಚಾರದಲ್ಲಿಯೂ ಎಸ್‌ಬಿಐ ಮುಕ್ತವಾಗಿ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.