ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ 10 ಸಾವಿರ ಉದ್ಯೋಗಿಗಳ ನೇಮಕಕ್ಕೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಿರ್ಧರಿಸಿದೆ. ತನ್ನ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸೇವೆಯನ್ನು ಉತ್ತಮಪಡಿಸುವುದಕ್ಕಾಗಿ ಈ ನೇಮಕಾತಿಗೆ ಮುಂದಾಗಿದೆ.
ಡಿಜಿಟಲ್ ಸೇವೆಯನ್ನು ಬಲಪಡಿಸಿ ಗ್ರಾಹಕರಿಗೆ ನಿರಂತರ ಸೇವೆ ನೀಡುವುದು ಬ್ಯಾಂಕ್‌ನ ಉದ್ದೇಶವಾಗಿದೆ. ಇದಕ್ಕಾಗಿ ತಂತ್ರಜ್ಞಾನ ವಿಭಾಗದಲ್ಲಿ ಹೂಡಿಕೆ ಪ್ರಮಾಣವನ್ನು ಹೆಚ್ಚಿಸಿದೆ.
‘ಸಾಮಾನ್ಯ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯಪಡೆಯ ಬಲವರ್ಧನೆಗೆ ನಿರ್ಧರಿಸಿದ್ದೇವೆ. ಇತ್ತೀಚೆಗೆ 1,500 ತಾಂತ್ರಿಕ ಉದ್ಯೋಗಿಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಲಾಗಿದೆ’ ಎಂದು ಎಸ್‌ಬಿಐ ಅಧ್ಯಕ್ಷ ಸಿ.ಎಸ್. ಸೆಟ್ಟಿ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಡೇಟಾ ಸೈಂಟಿಸ್ಟ್, ಡೇಟಾ ಆರ್ಕಿಟೆಕ್ಟ್, ನೆಟ್‌ವರ್ಕ್ ಆಪರೇಟರ್ ಸೇರಿ ತಂತ್ರಜ್ಞಾನ ವಿಭಾಗದ ವಿವಿಧ ಹುದ್ದೆಗಳಿಗೆ ನೇಮಕಕ್ಕೆ ಕ್ರಮವಹಿಸಲಾಗಿದೆ. ಪರಿಣತ ಹಾಗೂ ಸಾಮಾನ್ಯ ಸೇವಾ ವಿಭಾಗದಲ್ಲಿ ಹೊಸದಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.
ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ಎಸ್‌ಬಿಐನಲ್ಲಿ 2.32 ಲಕ್ಷ ಉದ್ಯೋಗಿಗಳು ಇದ್ದಾರೆ. ಈ ಪೈಕಿ 1.10 ಲಕ್ಷ ಉದ್ಯೋಗಿಗಳು ಗ್ರಾಹಕರಿಗೆ ಹಣಕಾಸು ಸೇವೆ ಒದಗಿಸುವ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.