ADVERTISEMENT

400 ಹೊಸ ಶಾಖೆ ಸ್ಥಾಪನೆ; ಹೂಡಿಕೆ ಉತ್ತೇಜನಕ್ಕೆ ಸಹಕಾರಿ –SBI ಅಧ್ಯಕ್ಷ ಖಾರಾ

ಪಿಟಿಐ
Published 23 ಜೂನ್ 2024, 16:35 IST
Last Updated 23 ಜೂನ್ 2024, 16:35 IST
   

ನವದೆಹಲಿ: ದೇಶದಾದ್ಯಂತ ಬ್ಯಾಂಕ್‌ನ ನೆಟ್‌ವರ್ಕ್‌ ವಿಸ್ತರಿಸುವ ಭಾಗವಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸದಾಗಿ 400 ಶಾಖೆಗಳನ್ನು ತೆರೆಯಲು ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆ‍ಫ್‌ ಇಂಡಿಯಾ (ಎಸ್‌ಬಿಐ) ನಿರ್ಧರಿಸಿದೆ.

ಕಳೆದ ಆರ್ಥಿಕ ವರ್ಷದಲ್ಲಿ 137 ಹೊಸ ಶಾಖೆಗಳನ್ನು ತೆರೆದಿತ್ತು. ಈ ಪೈಕಿ 59 ಶಾಖೆಗಳನ್ನು ಗ್ರಾಮೀಣ ಭಾಗದಲ್ಲಿ ತೆರೆದು, ಗ್ರಾಹಕರಿಗೆ ಅನುಕೂಲ ಕಲ್ಪಿಸಿತ್ತು.

‘ಬ್ಯಾಂಕ್‌ನ ಶೇ 89ರಷ್ಟು ವಹಿವಾಟು ಡಿಜಿಟಲ್‌ ರೂಪದಲ್ಲಿ ನಡೆಯುತ್ತಿದೆ. ಶೇ 98ರಷ್ಟು ವಹಿವಾಟು ಬ್ಯಾಂಕ್‌ನ ಹೊರಭಾಗದಲ್ಲಿ ನಡೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಹೊಸ ಶಾಖೆಗಳ ಅಗತ್ಯವಿದೆಯೇ ಎಂದು ಕೆಲವರು ನನಗೆ ಪ್ರಶ್ನೆ ಮುಂದಿಡುತ್ತಾರೆ. ಇದಕ್ಕೆ ನಾನು ‘ಹೌದು’ ಎಂದು ಉತ್ತರಿಸುತ್ತೇನೆ. ಹೊಸ ಪ್ರದೇಶಗಳಲ್ಲಿ ಬ್ಯಾಂಕ್‌ ಶಾಖೆಗಳ ಅಗತ್ಯತೆ ಹೆಚ್ಚಿರುತ್ತದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ದಿನೇಶ್‌ ಖಾರಾ ತಿಳಿಸಿದ್ದಾರೆ.

ADVERTISEMENT

ಗ್ರಾಹಕರಿಗೆ ಬ್ಯಾಂಕಿಂಗ್‌ ವ್ಯವಸ್ಥೆ ಕುರಿತ ಸಲಹೆ ಹಾಗೂ ಅವರ ಹೂಡಿಕೆಯ ಅಗತ್ಯತೆ ಪೂರೈಸಲು ಶಾಖೆಗಳಿಂದ ಮಾತ್ರ ಸಾಧ್ಯ. ಶಾಖೆ ತೆರೆಯಲು ಅವಕಾಶವಿರುವ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಹೊಸ ಶಾಖೆಗಳು ಕಾರ್ಯಾರಂಭ ಮಾಡಲಿವೆ’ ಎಂದು ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ದೇಶದಾದ್ಯಂತ ಎಸ್‌ಬಿಐ ಒಟ್ಟು 22,542 ಶಾಖೆಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.