ADVERTISEMENT

2022–23ರಲ್ಲಿ ಜಿಡಿಪಿ ಶೇ 7.5ರಷ್ಟು ಬೆಳವಣಿಗೆಯಾಗಲಿದೆ: ಎಸ್‌ಬಿಐ ವರದಿ

ಪಿಟಿಐ
Published 2 ಜೂನ್ 2022, 11:38 IST
Last Updated 2 ಜೂನ್ 2022, 11:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಮುಂಬೈ: ಪ್ರಸಕ್ತ ಹಣಕಾಸು ವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು ಎಸ್‌ಬಿಐ ಪರಿಷ್ಕರಣೆ ಮಾಡಿದೆ. 2022–23ನೇ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ 7.5ರಷ್ಟು ಬೆಳವಣಿಗೆ ಕಾಣಲಿದೆ ಎಂದು ಎಸ್‌ಬಿಐನ ಸಂಶೋಧನಾ ವರದಿ ಹೇಳಿದೆ. ಆರ್ಥಿಕತೆಯು ಶೇ 7.25ರಷ್ಟು ಬೆಳವಣಿಗೆ ಕಾಣಲಿದೆ ಎಂದು ಈ ಹಿಂದೆ ಎಸ್‌ಬಿಐ ಅಂದಾಜು ಮಾಡಿತ್ತು.

ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ, 2021–22ರಲ್ಲಿ ಆರ್ಥಿಕತೆಯು ಶೇ 8.7ರಷ್ಟು ಬೆಳವಣಿಗೆ ಕಂಡಿದೆ. ಮೌಲ್ಯದ ಲೆಕ್ಕದಲ್ಲಿ ₹ 147 ಲಕ್ಷ ಕೋಟಿಗೆ ತಲುಪಿದೆ. ಇದು ಕೋವಿಡ್‌ಗೂ ಮುಂಚಿನ ಅಂದರೆ, 2019–20ನೇ ಹಣಕಾಸು ವರ್ಷಕ್ಕಿಂತಲೂ ಕೇವಲ ಶೇ 1.5ರಷ್ಟು ಹೆಚ್ಚು ಬೆಳವಣಿಗೆ ಕಂಡಂತಾಗಿದೆ ಎಂದು ತಿಳಿಸಿದೆ.

ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇರುವುದು ಹಾಗೂ ಬಡ್ಡಿದರ ಏರಿಕೆಯಿಂದಾಗಿ 2022–23ರಲ್ಲಿ ಜಿಡಿಪಿಯು ₹ 11.1 ಲಕ್ಷ ಕೋಟಿಯಷ್ಟು ಹೆಚ್ಚಾಗಲಿದೆ. ಇದರಿಂದಾಗಿ ಜಿಡಿಪಿಯು ಶೇ 7.5ರಷ್ಟು ಬೆಳವಣಿಗೆ ಕಾಣಲಿದೆ. ಇದು ನಾವು ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತಲೂ ಶೇ 0.25ರಷ್ಟು ಹೆಚ್ಚು ಎಂದು ಎಸ್‌ಬಿಐನ ಮುಖ್ಯ ಆರ್ಥಿಕತಜ್ಞ ಸೌಮ್ಯಕಾಂತಿ ಘೋಷ್‌ ಹೇಳಿದ್ದಾರೆ.

ADVERTISEMENT

ಕಾರ್ಪೊರೇಟ್‌ ವರಮಾನ ಮತ್ತು ಲಾಭ ಹೆಚ್ಚಾಗುತ್ತಿರುವುದು ಹಾಗೂ ಬ್ಯಾಂಕ್‌ ಸಾಲ ನೀಡಿಕೆಯಲ್ಲಿ ಏರಿಕೆ ಕಂಡುಬರುತ್ತಿರುವ ಕಾರಣಗಳಿಂದಾಗಿ ಜಿಡಿಪಿಯು ಈ ಪ್ರಮಾಣದಲ್ಲಿ ಬೆಳವಣಿಗೆ ಕಾಣಲಿದೆ ಎಂದು ವರದಿಯು ಹೇಳಿದೆ.

2021–22ರಲ್ಲಿ ನೋಂದಣಿ ಆಗಿರುವ 2 ಸಾವಿರ ಕಂಪನಿಗಳು ಶೇ 29ರಷ್ಟು ಬೆಳವಣಿಗೆ ಕಂಡಿದ್ದು, ನಿವ್ವಳ ವರಮಾನವು 2020–21ಕ್ಕೆ ಹೋಲಿಸಿದರೆ ಶೇ 52ರಷ್ಟು ಏರಿಕೆ ಆಗಿದೆ. ಸಿಮೆಂಟ್‌, ಉಕ್ಕು ಇತ್ಯಾದಿ ಒಳಗೊಂಡು ನಿರ್ಮಾಣ ವಲಯಗಳ ವರಮಾನ ಶೇ 45 ಉತ್ತಮ ಬೆಳವಣಿಗೆ ಕಂಡಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ನಿಧಾನವಾಗಿ ರೆಪೊ ದರ ಹೆಚ್ಚಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ. ಜೂನ್‌ನಲ್ಲಿ ರೆಪೊ ದರವನ್ನು ಶೇ 0.50ರಷ್ಟು ಮತ್ತು ಆಗಸ್ಟ್‌ನಲ್ಲಿ ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್) ಶೇ 0.25ರಷ್ಟು ಹೆಚ್ಚಿಸಲಿದೆ ಎಂದು ಹೇಳಿದೆ.

ಮುಖ್ಯಾಂಶಗಳು

ಕಾರ್ಪೊರೇಟ್‌ ವರಮಾನ, ನಿವ್ವಳ ಲಾಭ ಏರಿಕೆ

ಬ್ಯಾಂಕ್‌ಗಳಿಂದ ಸಾಲ ನೀಡಿಕೆ ಹೆಚ್ಚಳ

ನಿರ್ಮಾಣ ವಲಯಗಳ ಉತ್ತಮ ಬೆಳವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.