ADVERTISEMENT

ಸಣ್ಣ, ಮಧ್ಯಮ ಉದ್ದಿಮೆಗೆ ತ್ವರಿತ ಸಾಲ: ಎಸ್‌ಬಿಐನಿಂದ ಸಾಲ ಯೋಜನೆ ಪ್ರಕಟ

ಪಿಟಿಐ
Published 11 ಜೂನ್ 2024, 23:30 IST
Last Updated 11 ಜೂನ್ 2024, 23:30 IST
<div class="paragraphs"><p>ಎಸ್‌ಬಿಐ</p></div>

ಎಸ್‌ಬಿಐ

   

ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು (ಎಸ್‌ಬಿಐ) ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಅರ್ಜಿ ಸಲ್ಲಿಸಿದ 45 ನಿಮಿಷದೊಳಗೆ ಸಾಲ ಮಂಜೂರಾತಿ ನೀಡಲು ‘ಎಸ್‌ಎಂಇ ಡಿಜಿಟಲ್‌ ಬ್ಯುಸಿನೆಸ್‌ ಸಾಲ’ ಯೋಜನೆಯನ್ನು ಮಂಗಳವಾರ ಜಾರಿಗೊಳಿಸಿದೆ. 

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬ್ಯಾಂಕ್‌ನ ಬೆಳವಣಿಗೆ ಮತ್ತು ಲಾಭದಾಯಕತೆ ದೃಷ್ಟಿಯಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಸಣ್ಣ ವ್ಯಾ‍ಪಾರ ಸಾಲ ನೀಡುವುದು ಪ್ರಧಾನ ಆದ್ಯತೆಯಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ADVERTISEMENT

ಮುಂಬರುವ ತಿಂಗಳುಗಳಲ್ಲಿ ಸಣ್ಣ ಉದ್ದಿಮೆಗಳಿಗೆ ಸಾಲ ನೀಡಿಕೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದೆ. 

2023–24ನೇ ಆರ್ಥಿಕ ವರ್ಷದ ಮಾರ್ಚ್‌ ಅಂತ್ಯಕ್ಕೆ ದೇಶದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ₹4.33 ಲಕ್ಷ ಕೋಟಿ ಸಾಲ ನೀಡಲಾಗಿದೆ. ಒಟ್ಟಾರೆ ಸಾಲ ನೀಡಿಕೆಯಲ್ಲಿ ಶೇ 20ರಷ್ಟು ಏರಿಕೆಯಾಗಿದೆ. 2019–20ನೇ ಆರ್ಥಿಕ ವರ್ಷದಲ್ಲಿ ಈ ವಲಯದ ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 9.43ರಷ್ಟು ಇತ್ತು. ಸದ್ಯ ಶೇ 3.75ಕ್ಕೆ ಕುಗ್ಗಿದೆ ಎಂದು ವಿವರಿಸಿದೆ. 

‘ಈ ಹೊಸ ಯೋಜನೆಯಡಿ ಎಂಎಸ್‌ಎಂಇಗಳಿಗೆ ಕ್ಷಿ‍ಪ್ರಗತಿಯಲ್ಲಿ ಸಾಲ ನೀಡಲಾಗುತ್ತದೆ. ಆ ಮೂಲಕ ಈ ವಲಯದ ಉದ್ದಿಮೆಗಳಿಗೆ ಸಾಲ ನೀಡಿಕೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಳ್ಳುವುದೇ ನಮ್ಮ ಗುರಿಯಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ದಿನೇಶ್‌ ಖಾರಾ ಹೇಳಿದ್ದಾರೆ.

ಹಳೆಯ ವಿಧಾನದಲ್ಲಿ ಸಾಲ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಲು ದೀರ್ಘಾವಧಿ ಹಿಡಿಯುತ್ತಿತ್ತು. ಹೊಸ ವಿಧಾನದಲ್ಲಿ ಇದನ್ನು ಸರಳೀಕರಿಸಲಾಗಿದ್ದು, ತ್ವರಿತವಾಗಿ ಮಂಜೂರಾತಿ ದೊರೆಯಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಸಾಲ ಪಡೆಯಲು ಅರ್ಜಿ ಸಲ್ಲಿಸುವ ಉದ್ದಿಮೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ, ಸರಕು ಮತ್ತು ಸೇವಾ ತೆರಿಗೆ ಇಲಾಖೆಯಿಂದ ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಈ ಅಂಕಿಅಂಶಗಳನ್ನು ಕ್ರೋಡೀಕರಿಸಿದ ಬಳಿಕ ಸಂಬಂಧಪಟ್ಟ ಉದ್ದಿಮೆಗಳ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಹತ್ತು ಸೆಕೆಂಡ್‌ನೊಳಗೆ ಮಂಜೂರಾತಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ. 

₹50 ಲಕ್ಷದ ವರೆಗೆ ಸಾಲ ಪಡೆಯಲು ಅರ್ಜಿ ಸಲ್ಲಿಸುವ ಉದ್ದಿಮೆಗಳ ಹಣಕಾಸು ವರದಿಗಳು, ಉದ್ದಿಮೆಗಳ ವ್ಯವಹಾರ ಮತ್ತು ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.